ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಈಕೆ ಮೂಡುಬಿದಿರೆಯ ಧವಲಾ ಕಾಲೇಜಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಮೂಲ ಸೌಕರ್ಯಗಳಿಲ್ಲದ ಒಂಟಿಕಜೆಯ ನಿರ್ಜನ ಪ್ರದೇಶದಲ್ಲಿ ಕತ್ತಲಾದರೆ ಓದಿಗೂ ಬೆಳಕಿನ ತತ್ವಾರ. ಹಿಂದೊಮ್ಮೆ ಪಂಚಾಯಿತಿ ಸೋಲಾರ್ ಆಳವಡಿಸಿದರೂ ಅದು ಕೆಟ್ಟು ನಿಂತು ಹಲವು ವರ್ಷಗಳಾಗಿವೆ. ಹೀಗಾಗಿ ಚಿಮಿಣಿ ದೀಪ, ಕ್ಯಾಂಡಲ್ ಬೆಳಕಿನಲ್ಲೇ ಓದು ಮುಂದುವರಿಸಿದ ಯಕ್ಷಿತಾ ಉನ್ನತ ವ್ಯಾಸಂಗದ ಕನಸಿಗೆ ಮೂಡುಬಿದಿರೆಯ ಸಹಸ್ರ ಎನರ್ಜಿ ಸಿಸ್ಟಂ ಕಂಪನಿಯು ಬೆಳಕಾಗಿ ಬಂದಿದ್ದು, ಆಕೆಯ ಮನೆಗೆ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಿದೆ. ಹಲವು ವರ್ಷಗಳ ಹಿಂದೆ ಇಲ್ಲಿದ್ದ ಅವಿಭಕ್ತ ಮಲೆಕುಡಿಯ ಕುಟುಂಬ ಹಂಚಿ ಹೋಗಿ ಮೂರು ಕುಟುಂಬಗಳು ಮಾತ್ರ ವಾಸಿಸುತ್ತಿವೆ. ಆ ಪೈಕಿ ಯಕ್ಷಿತಾ ಮನೆಯಲ್ಲೇ ಆಕೆಯ ಸಹೋದರರಿಬ್ಬರ ಪೈಕಿ ಯಶವಂತ್ ಪಿಯುಸಿಗೆ ಓದು ನಿಲ್ಲಿಸಿದ್ದು ರವಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ.
ಪ್ರತಿಭಾವಂತ ವಿದ್ಯಾರ್ಥಿನಿ: ಯಕ್ಷಿತಾ ಎಸ್ಸೆಸ್ಸೆಲ್ಸಿಯಲ್ಲಿ ಶೇ. 81, ಪಿಯುಸಿಯಲ್ಲಿ ಶೇ.86, ಪದವಿ ಮೊದಲ ವರ್ಷ ಶೇ.88, ಎರಡನೇ ವರ್ಷ ಶೇ.89 ಹಾಗೂ 5ನೇ ಸೆಮಿಸ್ಟರ್‌ನಲ್ಲಿ ಶೇ.92 ಅಂಕಗಳನ್ನು ಕಳಿಸಿ ಪ್ರಗತಿಯ ಸಾಧನೆ ದಾಖಲಿಸಿದ್ದಾಳೆ.ಕಾಡು ಮತ್ತು ಬೆಟ್ಟದ ದಾರಿಯಲ್ಲಿ 6 ಕಿ.ಮೀ. ನಡೆದು ಬಸ್ ನಿಲ್ದಾಣ ತಲುಪುವ ಅನಿವಾರ್ಯತೆಯೊಂದಿಗೆ, ಈಕೆಯು ರಾತ್ರಿ ವಿದ್ಯುತ್ ದೀಪವಿಲ್ಲದೆ ಚಿಮಣಿ ದೀಪದಲ್ಲಿ ಓದಿ ಪರೀಕ್ಷೆಗೆ ಸಿದ್ಧವಾಗುತ್ತಿದ್ದಳು. ಅನಾರೋಗ್ಯದಲ್ಲಿರುವ ತಂದೆ, ತಾನು ಕಲಿಯದಿದ್ದರೂ ಮಗಳ ಉಜ್ವಲ ಭವಿಷ್ಯಕ್ಕಾಗಿ ದುಡಿಯುತ್ತಿರುವ ತಾಯಿ ಗಿರಿಜಾ ಅವರ ಸಂಪಾದನೆಯಿಂದಲೇ ಐದು ಮಂದಿಯ ಸಂಸಾರ ಮುನ್ನಡೆಯುವ ಸ್ಥಿತಿ ಅಲ್ಲಿದೆ.
ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಆದರೆ ಸಹಸ್ರ ಎನರ್ಜಿ ಮತ್ತು ಕಾಲೇಜಿನ ಎನ್.ಸಿ.ಸಿ ಬಳಗದವರು ಮನೆಯನ್ನೇ ಬೆಳಗಿಸಿದ್ಧಾರೆ. ಮುಂದೆ ಎಂ.ಎಸ್.ಡಬ್ಲ್ಯು ಅಥವಾ ಕಾನೂನು ಓದುವ ಕನಸಿದೆ ಎನ್ನುತ್ತಾರೆ ಯಕ್ಷಿತಾ.