ಜಿಲೇಬಿ, ಬೂಂದೆ ಪ್ರಸಾದ ಸೇವಿಸಿದ ಖಾಸ್ಗತ ಭಕ್ತರು

KannadaprabhaNewsNetwork | Published : Jul 18, 2024 1:33 AM

ಸಾರಾಂಶ

ತಾಳಿಕೋಟೆ ಪಟ್ಟಣದ ಖಾಸ್ಗತೇಶ್ವರ ಮಠದ ಜಾತ್ರೋತ್ಸವ ಅಂಗವಾಗಿ ಬುಧವಾರ ಶ್ರೀಮಠದ ವತಿಯಿಂದ ಭಕ್ತಾದಿಗಳಿಗೆ ಸಿದ್ಧಪಡಿಸಲಾದ ಜಿಲೇಬಿ, ಬೂಂದೆ ಅಲ್ಲದೇ ಚಿತ್ರನ್ನ ಪ್ರಸಾದವನ್ನು ಬಂದ ಭಕ್ತಾದಿಗಳು ಸೇವಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಖಾಸ್ಗತೇಶ್ವರ ಮಠದ ಜಾತ್ರೋತ್ಸವ ಅಂಗವಾಗಿ ಬುಧವಾರ ಶ್ರೀಮಠದ ವತಿಯಿಂದ ಭಕ್ತಾದಿಗಳಿಗೆ ಸಿದ್ಧಪಡಿಸಲಾದ ಜಿಲೇಬಿ, ಬೂಂದೆ ಅಲ್ಲದೇ ಚಿತ್ರನ್ನ ಪ್ರಸಾದವನ್ನು ಬಂದ ಭಕ್ತಾದಿಗಳು ಸೇವಿಸಿದರು.

ಶ್ರೀಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರ ಅಪೇಕ್ಷೆಯ ಮೇರೆಗೆ ಬುಧವಾರ ರಾತ್ರಿಯಿಂದಲೇ ಜಿಲೇಬಿ ತಯಾರಿಕೆಯ ಕಾರ್ಯ ಭರದಿಂದ ಸಾಗಿತ್ತು ಸುಮಾರು ನೂರಾರು ಜನ ಭಕ್ತರು ಜಿಲೇಬಿ, ಬೂಂದೆ, ಚಿತ್ರನ್ನದ ಪ್ರಸಾದವು ಬೆಳಗ್ಗೆ ೯ ಗಂಟೆಯಿಂದ ಭಕ್ತಸಮೂಹಕ್ಕೆ ಯಾವುದೇ ರೀತಿಯಿಂದ ಪ್ರಸಾದಕ್ಕೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡರು. ಪ್ರಸಾದ ಸ್ವೀಕರಿಸುವ ಸಮಯದಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಇಂದು ೧೫ ಕ್ವಿಂಟಲ್ ಹುಗ್ಗಿ ಪ್ರಸಾದ:

ಖಾಸ್ಗತ ಮಠದ ಜಾತ್ರೋತ್ಸವ ಅಂಗವಾಗಿ ಗುರುವಾರ ಕೂಡಾ ವಿಶೇಷವಾಗಿ ಹುಗ್ಗಿ, ತುಪ್ಪದ ಪ್ರಸಾದವನ್ನು ಸುಮಾರು ೧೫ ಸಾವಿರಕ್ಕೂ ಅಧಿಕ ಭಕ್ತಾದಿಗಳಿಗಾಗಿ ಸಿದ್ಧಪಡಿಸಲಾಗುತ್ತಿದ್ದು, ಅದರ ಜೊತೆಯಾಗಿ ರೊಟ್ಟಿ, ಅನ್ನ, ಸಾಂಬರಕೂಡಾ ನೀಡಲು ಎಲ್ಲ ರೀತಿಯಿಂದಲೂ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ತಿಳಿಸಿದ್ದಾರೆ.

ಇಂದು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮ

ಶ್ರೀಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ಗುರುವಾರ ನಸುಕಿನ ಜಾವ ೫.೩೦ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮವು ಭಕ್ತಿ ಭಾವದೊಂದಿಗೆ ಜರುಗಲಿದೆ. ೯ ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮವು ಗೋಪಾಲಕಾವಲಿ (ಮೊಸರುಗಡಿಗೆ) ಒಡೆಯುವದರ ಮೂಲಕ ಮಂಗಲಗೊಳ್ಳಲಿದೆ. ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಗೋಪಾಲ ಕಾವಲಿ ಒಡೆಯುವ ಮುಂಚೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯುವುದು.

Share this article