ವಿವಿಧ ಕ್ಷೇತ್ರಗಳಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆ

KannadaprabhaNewsNetwork |  
Published : Jul 18, 2024, 01:33 AM IST
ಅಶೋಕ್ ಹಾರನಹಳ್ಳಿ ಅವರಿಂದ ಉದ್ಘಾಟನೆ, ಚಿತ್ರದಲ್ಲಿಹೆಚ್.ಎಸ್. ರಾಘವೇಂದ್ರ, ಅಸಗೋಡು ಜಯಸಿಂಹ, ಪ್ರಶಾಂತ್ಕೂಡ್ಲಿಗಿ, ನರೇಂದ್ರಕುಮಾರ್ ಮತ್ತಿತರರಿದ್ದಾರೆ. | Kannada Prabha

ಸಾರಾಂಶ

ಹಲವಾರು ಕ್ಷೇತ್ರಗಳಲ್ಲಿಂದು ಬ್ರಾಹ್ಮಣರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ

ಕನ್ನಡಪ್ರಭ ವಾರ್ತೆ, ತುಮಕೂರುರಾಜಕೀಯ, ನ್ಯಾಯಾಂಗ ಹಾಗೂ ಕಾರ್ಯಾಂಗ ಕ್ಷೇತ್ರಗಳೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿಂದು ಬ್ರಾಹ್ಮಣರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಬ್ರಾಹ್ಮಣ ಸಮುದಾಯ ಹಾಗೂ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಕಳವಳ ವ್ಯಕ್ತಪಡಿಸಿದರು.ಬುಧವಾರ ತುಮಕೂರಿನ ಶಂಕರಮಠದಲ್ಲಿ ಏರ್ಪಟ್ಟಿದ್ದ ತುಮಕೂರು ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ 20ನೇ ವಾರ್ಷಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬ್ರಾಹ್ಮಣರು ಕಠಿಣ ಪರಿಶ್ರಮ ಹಾಗೂ ಸ್ವಂತ ಯೋಗ್ಯತೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದರೂ ಅವರನ್ನು ಅಸಹನೆಯಿಂದ ಕಾಣುವ, ಸಮಸ್ಯೆಗಳಿಗೆಲ್ಲಾ ಬ್ರಾಹ್ಮಣರೇ ಕಾರಣ ಎಂದು ದೂಷಿಸುವ ಕೆಟ್ಟ ಚಾಳಿ ಪ್ರಾರಂಭವಾಗಿದೆ. ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರುಗಳೂ ಸಹ ಬ್ರಾಹ್ಮಣ ಸಮುದಾಯದ ನೆರವಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಸಮುದಾಯದ ಅಶಕ್ತ ವ್ಯಕ್ತಿಗಳಿಗೆ ಅಗತ್ಯ ಸಹಾಯ ಮಾಡಲು ಬ್ರಾಹ್ಮಣರ ಸಂಘಟನೆ ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.ಬ್ರಾಹ್ಮಣ ಸಮುದಾಯದಲ್ಲಿ ಒಂದೆಡೆ ಉಪ ಪಂಗಡಗಳ ನಡುವೆ ಸಣ್ಣಸಣ್ಣ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲೂ ಸೇರಿದಂತೆ ಅನೇಕ ಕಡೆ ಪರಸ್ಪರ ಕೆಸರೆರೆಚಾಟ ನಡೆಯುತ್ತಿದೆ. ಮತ್ತೊಂದೆಡೆ ಸಮುದಾಯದ ಯುವಕ-ಯುವತಿಯರು ಅನ್ಯ ಮತದವರ ಕಡೆ ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಸಂಘಟಿತರಾಗಿ ಗಂಭೀರವಾಗಿ ಆಲೋಚಿಸಬೇಕಾದ ಅನಿವಾರ್ಯತೆಯಿದೆ ಎಂದು ಅಶೋಕ್ ಹಾರನಹಳ್ಳಿ ಹೇಳಿದರು.ಪ್ರತಿಭಾ ಪುರಸ್ಕಾರ ನೆರವೇರಿಸಿದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಹಿರಿಯರಿರುವ ಮನೆಯೇ ದೇವಾಲಯವಿದ್ದಂತೆ. ಸಮಾಜದಲ್ಲಿ ತಮಗೆ ಉತ್ತಮವಾಗಿ ಬದುಕಲು ಅನುವು ಮಾಡಿಕೊಟ್ಟ ತಂದೆತಾಯಿಯನ್ನು ಜೋಪಾನವಾಗಿ ಆರೈಕೆ ಮಾಡುವ ಜವಾಬ್ದಾರಿ ಹಾಗೂ ಕರ್ತವ್ಯ ಮಕ್ಕಳ ಮೇಲಿದೆ. ಎಂತಹ ಪರಿಸ್ಥಿತಿಯಲ್ಲೂ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.ಸಮಾಜದಲ್ಲಿಂದು ಎಲ್ಲ ರಾಜಕೀಯ ಪಕ್ಷಗಳು ಬ್ರಾಹ್ಮಣ ಸಮುದಾಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮುದಾಯದ ನೆರವಿಗೆ ಬರುತ್ತಿಲ್ಲ. ಒಂದು ಪಕ್ಷದವರು ಬ್ರಾಹ್ಮಣರು ತಮಗೆ ಮತ ಹಾಕುವುದಿಲ್ಲ ಎಂದು ಕಡೆಗಣಿಸುತ್ತಾರೆ. ಮತ್ತೊಂದು ಪಕ್ಷದವರು ಬ್ರಾಹ್ಮಣರು ನಮಗಲ್ಲದೆ ಇನ್ಯಾರಿಗೆ ಮತ ಹಾಕುತ್ತಾರೆ ಎಂಬ ಉಡಾಫೆ ಧೋರಣೆ ತೋರುತ್ತಾರೆ. ಈ ಮನೋಭಾವ ಕೊನೆಗಾಣಿಸಬೇಕಾದರೆ ಸಮುದಾಯ ಸಂಘಟಿತರಾಗಿ ಹೋರಾಡಬೇಕೆಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್, ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಸಮುದಾಯದ ಯುವಜನತೆ ಇಂದು ಕೇವಲ ಐಟಿ ಕ್ಷೇತ್ರದ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಗಮನ ಕೊಡುತ್ತಿಲ್ಲ. ಬ್ರಾಹ್ಮಣ ಸಂಘಟನೆಗಳು ಸಮುದಾಯದ ಯುವಕ-ಯುವತಿಯರು ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ಕ್ಷೇತ್ರಗಳತ್ತ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಕಾರ್ಯೋನ್ಮುಖರಾಗಬೇಕಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಧ್ಯೇಯೋದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ತುಮಕೂರಿನ ಕೀಲು ಮತ್ತು ಮೂಳೆರೋಗ ತಜ್ಞ ಡಾ. ವಿ.ಮುರಳೀಧರ ವಿಶೇಷ ಆಹ್ವಾನಿತರಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಸಿ.ಎ.ನರೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಎಸ್ಎಸ್ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿಧಿ, ಶಿಕ್ಷಕಿ ಡಾ. ರಶ್ಮಿ ಅವರಿಗೆ ನೆನಪಿನ ಕಾಣಿಕೆ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು.

ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿವೃತ್ತರಾದ ವಿಪ್ರ ನೌಕರರನ್ನು ಗೌರವಿಸಲಾಯಿತು. ಶ್ರೀಧರದತ್ತರಾಜು, ರಾಮಮೂರ್ತಿ ವೇದಘೋಷ ಮಾಡಿದರು. ಬಿ.ಎಸ್.ಅಪರ್ಣಾರಾವ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಟಿ.ಸಿ.ನಟರಾಜ್ ವಂದಿಸಿದರು. ಉಪನ್ಯಾಸಕಿ ಡಾ. ಚೈತಾಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ನೂರಾರು ಸಂಖ್ಯೆಯಲ್ಲಿ ವಿಪ್ರ ನೌಕರರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ