ಖಾಸಗಿ ಶಿಕ್ಷಣ ಸಂಸ್ಥೆಗಳು ಜೂ. 5ರೊಳಗೆ ಶಾಲಾ ಶುಲ್ಕ ಘೋಷಣೆ ಮಾಡಲಿ: ಡಿಸಿ ದಿವಾಕರ ಸೂಚನೆ

KannadaprabhaNewsNetwork |  
Published : Jun 02, 2025, 12:01 AM IST
ಹೊಸಪೇಟೆಯಲ್ಲಿ ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳು ಡಿಸೆಂಬರ್ ತಿಂಗಳಲ್ಲಿ ಶಾಲಾ ಶುಲ್ಕ ಘೋಷಿಸಿಕೊಳ್ಳಬೇಕಿದೆ. ಆದರೆ ಇಲ್ಲಿಯವರೆಗೂ ಬಹುತೇಕ ಮಾಹಿತಿ ಇಲ್ಲ. ಜೂ. 5ರೊಳಗೆ ಶಾಲಾ ಶುಲ್ಕ ಘೋಷಣೆಗೆ ಗಡುವು ನೀಡಲಾಗಿದೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಭೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳು ಡಿಸೆಂಬರ್ ತಿಂಗಳಲ್ಲಿ ಶಾಲಾ ಶುಲ್ಕ ಘೋಷಿಸಿಕೊಳ್ಳಬೇಕಿದೆ. ಆದರೆ ಇಲ್ಲಿಯವರೆಗೂ ಬಹುತೇಕ ಮಾಹಿತಿ ಇಲ್ಲ. ಜೂ. 5ರೊಳಗೆ ಶಾಲಾ ಶುಲ್ಕ ಘೋಷಣೆಗೆ ಗಡುವು ನೀಡಲಾಗಿದೆ. ನಿರ್ಲಕ್ಷಿಸಿದರೆ ಅಂತಹ ಶಾಲೆಗಳ ಮಾಹಿತಿಯನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 1612 ಶಾಲೆಗಳಿವೆ. ಅದರಲ್ಲಿ ಶೇ. 25ರಷ್ಟು ಅಂದರೆ 406 ಶಾಲೆಗಳು ಅನುದಾನರಹಿತ ಶಾಲೆಗಳಾಗಿವೆ. 16 ಸಿಬಿಎಸ್‌ಇ, 3 ಐಸಿಎಸ್‌ಇ ಶಾಲೆಗಳಿವೆ. ಜಿಲ್ಲೆಯ ಯಾವುದೇ ಶಾಲೆಗಳು ಹೆಚ್ಚುವರಿ ಶುಲ್ಕ ಸಂಗ್ರಹಿಸಿದರೆ ಮುಲಾಜಿಲ್ಲದೇ ನಿಯಮಾನುಸಾರ ಶಿಸ್ತುಕ್ರಮ ವಹಿಸಲಾಗುವುದು. ಎಲ್ಲ ಶಾಲೆಗಳ ಸೂಚನಾ ಫಲಕಗಳಲ್ಲಿ ಶುಲ್ಕದ ವಿವರವನ್ನು ಪ್ರದರ್ಶಿಸಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ 15 ವರ್ಷ ಮೀರಿದ 112 ಶಾಲಾ ವಾಹನಗಳಿವೆ ಎಂದು ವರದಿ ಇದೆ. ಆರ್‌ಟಿಒ ಪರವಾನಗಿ, ವಿಮೆ ಇಲ್ಲದೇ ಶಾಲಾ ವಾಹನಗಳನ್ನು ಬಳಸುವಂತಿಲ್ಲ. ಜೂ. 5ರೊಳಗೆ ಎಲ್ಲ ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಖಾಸಗಿ ಶಾಲೆಗಳಲ್ಲಿ ಯುನಿಫಾರ್ಮ್, ಶೂ, ಬ್ಯಾಗ್, ಬುಕ್ಸ್ ಮಾರಾಟ ಮಾಡುವುದು, ಕಡ್ಡಾಯವಾಗಿ ಇಲ್ಲಿಯೇ ಖರೀದಿಸಬೇಕು ಎಂದು ಒತ್ತಡ ಹೇರಿದ ದೂರುಗಳು ಬಂದರೆ ಅಂತಹ ಶಾಲೆಯ ವಿರುದ್ಧ ಕ್ರಮವಹಿಸಲಾಗುವುದು. ಶಾಲೆಗಳಲ್ಲಿ ಬೋಧಕ ಸಿಬ್ಬಂದಿಯಂತೆ ನೈರ್ಮಲ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಬಹುತೇಕ ಶಾಲೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಮಾನವೀಯತೆ ಅಧಾರದ ಮೇಲೆ ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದರು.

ವಿದ್ಯಾರ್ಥಿನಿಯರು ನೀರು ಕುಡಿಯಲು ಹಿಂಜರಿಕೆ:

ಎಲ್ಲ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೂ ಪರವಾಗಿಲ್ಲ. ಶೌಚಗೃಹ ಅವ್ಯವಸ್ಥೆಯನ್ನು ಸರಿಪಡಿಸಿ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಯರು ಶಾಲೆಯಲ್ಲಿ ನೀರು ಕುಡಿಯಲು ಹಿಂಜರಿಯುತ್ತಿದ್ದಾರೆ. ಇದರಿಂದ ಹೆಣ್ಣುಮಕ್ಕಳಿಗೆ ಎಂತಹ ಸಮಸ್ಯೆಗಳು ಉಲ್ಬಣಿಸಲಿವೆ ಎಂಬ ಕನಿಷ್ಠ ಕಾಳಜಿ ಶಾಲಾ ಆಡಳಿತ ಮಂಡಳಿಗಳಿಗೆ ಇದೆಯೇ? ಮೊದಲು ಶೌಚಗೃಹಗಳ ನೈರ್ಮಲ್ಯತೆಗೆ ಆದ್ಯತೆ ನೀಡಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ ರಾಮಚಂದ್ರಪ್ಪ ಮಾತನಾಡಿ, ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಅನಧಿಕೃತ ಶಾಲೆಗಳು, ಶಾಲೆಗಳಲ್ಲಿ ಅನಧಿಕೃತ ಮಾಧ್ಯಮ ನಿರ್ವಹಣೆ, ಅನಧಿಕೃತ ಪಠ್ಯಕ್ರಮ ಪಾಲನೆ, ಅನಧಿಕೃತ ತರಗತಿ, ಶಿಕ್ಷಕರ ಕುರಿತು ದೂರುಗಳು ದಾಖಲಾದರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಶಾಲೆಗಳು ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕಿದೆ ಎಂದರು.

ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ, ಹಗರಿಬೊಮ್ಮನಹಳ್ಳಿ ಬಿಇಒ ಮೈಲೇಶ್ ಬೇವೂರು ಹಾಗೂ ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ