ಕನ್ನಡಪ್ರಭ ವಾರ್ತೆ ಆಲೂರು
ಕೋರ್ಟ್ ಆದೇಶದಂತೆ ಮನೆ ಜಪ್ತಿ ಮಾಡಿದ ಖಾಸಗಿ ಬ್ಯಾಂಕ್, ಮಾನವೀಯತೆಯೂ ಇಲ್ಲದೇ ಬ್ಯಾಂಕ್ ಅಧಿಕಾರಿಗಳು ಮನೆಗೆ ಬೀಗ ಹಾಕಿದ್ದು, ಇದೀಗ ಕುಟುಂಬಸ್ಥರು ತನ್ನ ಸಾಮಗ್ರಿಗಳ ಜೊತೆಗೆ ಮನೆಯಿಂದ ಆಚೆಯೇ ಬೀದಿಯಲ್ಲಿದ್ದು ನೆರೆ ಮನೆಯ ಅಶ್ರಯ ಪಡೆದು ಸಹಾಯಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಇಂಥದ್ದೊಂದು ಅಮಾನವೀಯ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಕುಂದೂರು ಹೋಬಳಿಯ ವಳಗರವಳ್ಳಿ ಗ್ರಾಮದಲ್ಲಿ ನಡೆದಿದೆ. ವಳಗರಹಳ್ಳಿ ಗ್ರಾಮದ ಪ್ರಸನ್ನ ಹಾಗೂ ಉಮಾವತಿ ದಂಪತಿ ಕುಟುಂಬವನ್ನು ಈಕ್ವಿಟಾಸ್ ಬ್ಯಾಂಕ್ ಅಧಿಕಾರಿಗಳು ಮನೆಯಿಂದ ಹೊರ ಹಾಕಿ, ಬೀದಿ ಪಾಲು ಮಾಡಿದ್ದಾರೆ. ತಮ್ಮ ಮನೆಯ ಬಾಗಿಲಲ್ಲೇ ತಮ್ಮ ಸಾಮಗ್ರಿಗಳ ಜೊತೆ ಕುಳಿತ ಉಮಾವತಿ ಸಹಾಯಕ್ಕಾಗಿ ರೈತ ಮುಖಂಡ ಕಣಗಾಲ್ ಮೂರ್ತಿ ಮೋರೆ ಹೋಗಿದ್ದು ಇದನ್ನು ಗಮನಿಸಿದ ರೈತ ಮುಖಂಡರು ಕುಟುಂಬಸ್ಥರ ಅಸಹಾಯಕ ಸ್ಥಿತಿ ಬಗ್ಗೆ ತಿಳಿದು ತಮ್ಮ ರೈತ ಸಂಘಟನೆಯವರೆಲ್ಲರು ಸೇರಿ ಮನೆಯ ಬೀಗ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಘಟನೆಯ ವಿವರ:
ಈ ಬಗ್ಗೆ ಮನೆಯ ವಾರಸುದಾರಿ ಉಮಾವತಿ ಮಾತನಾಡಿ ನಾವು 2019ರಲ್ಲಿ ಈಕ್ವಿಟಾಸ್ ಮೈಕ್ರೋ ಫೈನಾನ್ಸ್ ಬ್ಯಾಂಕ್ನಲ್ಲಿ ಮನೆಯ ಮೇಲೆ ಎರಡು ಲಕ್ಷ ರು. ಹಣ ಲೋನ್ ಮಾಡಿಸಿದ್ದೆವು. ಅದರಲ್ಲಿ ನಮಗೆ ಒಂದು ಲಕ್ಷದ ಎಂಬತ್ತು ಸಾವಿರ ಹಣ ನಮಗೆ ಸಿಕ್ಕಿದ್ದು ಈ ಹಣವನ್ನು ನಾವು ಕಷ್ಟಪಟ್ಟು ಕಟ್ಟಿದ್ದೇವೆ. ಆದರೂ ಕೂಡ ಬ್ಯಾಂಕ್ ಸಿಬ್ಬಂದಿ ಮೂರು ಲಕ್ಷದ ಮೂವತ್ತು ಸಾವಿರ ರು. ಹಣವನ್ನು ಕಟ್ಟಿಕೊಡಿಯೆಂದು ಹಿಂಸೆ ಕೊಡುತ್ತಿದ್ದೂ ನಾವು ಅಷ್ಟೊಂದು ಹಣವನ್ನು ಕಟ್ಟಲು ಆಗುವುದಿಲ್ಲವೆಂದಾಗ ನಾವು ಇಲ್ಲದ ಸಮಯದಲ್ಲಿ ನಮ್ಮ ಮಗಳನ್ನು ಮನೆಯಿಂದ ಆಚೆ ಹಾಕಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ನಮ್ಮ ಮನೆಯವರು ಕಾಯಿಲೆ ಪೀಡಿತರಾಗಿದ್ದು ಅವರನ್ನು ಮಂಗಳೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದು ನಾವು ಅದನ್ನು ನೋಡಿಲ್ಲ ಆಸ್ಪತ್ರೆಯಿಂದ ಬರುವಷ್ಟರಲ್ಲಿ ನಮ್ಮ ಮಗಳು ಒಬ್ಬಳೇ ಇದ್ದಾಗ ಅವಳನ್ನು ಮನೆಯಿಂದ ಹೊರಗೆ ತಳ್ಳಿ ಬೀಗ ಹಾಕಿಕೊಂಡು ಹೋಗಿದ್ದಾರೆ. ನಾವು ಹಣವನ್ನು ನಿಗದಿ ಪಡಿಸಿದ ದಿನಕ್ಕೆ ಸರಿಯಾಗಿ ಕಟ್ಟಿ ಕೊಟ್ಟರು ಕೂಡ ಬ್ಯಾಂಕ್ ಸಿಬ್ಬಂದಿ ಬಾಯಿಗೆ ಬಂದಂತೆ ಬೈದು ಏಕವಚನದಲ್ಲಿ ಮಾತಾನಾಡುತ್ತಿದ್ದರು. ಅಲ್ಲದೆ ಕೆಲಸ ಮಾಡಲು ಬಿಡದೆ ಹಿಂಸೆ ಕೊಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾವು ಕಟ್ಟಿದ ಹಣವನ್ನು ಬ್ಯಾಂಕ್ ಸಿಬ್ಬಂದಿ ಕಟ್ಟದೇ ನಮ್ಮ ಮೇಲೆ ಆರೋಪ ಹೊರೆಸುತ್ತಿದ್ದಾರೆ. ಇನ್ನೂ ಹೆಚ್ಚು ಹಣ ಕಟ್ಟುವಂತೆ ಹಿಂಸೆ ಕೂಡುತ್ತಿದ್ದಾರೆ. ನಾವು ಬಡವರು ನಮಗೆ ಅಷ್ಟೊಂದು ಹಣವನ್ನು ಕಟ್ಟಲು ಸಾಧ್ಯವಿಲ್ಲವೆಂದು ಕಣ್ಣೀರಿಡುತ್ತಾ ತಮ್ಮ ಆಳಲನ್ನು ತೋಡಿಕೊಂಡರು. ಹಾಸನ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ಮಾತಾನಾಡಿ ಮನೆ ಅಡಮಾನ ಮಾಡಿ ಮೂರು ಲಕ್ಷ ಸಾಲ ಮಾಡಿದ ಕಾರಣ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡಿದ್ದು ಮನೆ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಒಬ್ಬ ಸಾಮಾನ್ಯ ಬಡ ಕುಟುಂಬಗಳ ಮೇಲೆ ಖಾಸಗಿ ಬ್ಯಾಂಕಿನವರ ದಬ್ಬಾಳಿಕೆ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು ಎರಡು ಲಕ್ಷಕ್ಕೆ ಮೂರು ಲಕ್ಷ ಹಣ ಕಟ್ಟಿಯೆಂದರೆ ಹೇಗೆ ಕಟ್ಟುತ್ತಾರೆ. ಹಾಗಾದ್ರೆ ಬ್ಯಾಂಕಿನಲ್ಲಿ ಬಡ್ಡಿ ಹಣವೆಷ್ಟು ಎಂದು ಪ್ರಶ್ನಿಸಿದರು.ಹೆಚ್ಚು ಬಡ್ಡಿ ಹಣದ ಆಸೆಗೆ ಮೈಕ್ರೋ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮಹಿಳೆಗೆ ತೊಂದರೆ ಕೊಟ್ಟು ಮನೆಗೆ ಬೀಗ ಹಾಕಿ ಜಪ್ತಿ ಮಾಡಿಸಿದ್ದಾರೆ. ಮನೆಯಲ್ಲಿ ಒಂದು ಹೆಣ್ಣು ಮಗು ಏನು ಇಲ್ಲದೆ ಬರೀ ಕೈನಲ್ಲಿ ಕಳುಹಿಸುವುದೆಂದರೆ ಏನು ಅರ್ಥ. ಬ್ಯಾಂಕ್ ಸಿಬ್ಬಂದಿಗೆ ಮಾನ ಮರ್ಯಾದೆ ಇಲ್ಲವೇ ಒಂದಿಷ್ಟು ಮಾನವೀಯತೆಯು ಇಲ್ಲದೆ ಹೆಣ್ಣು ಮಕ್ಕಳನ್ನು ಹೊರಗೆ ತಳ್ಳಿ ಬೀಗ ಹಾಕಿದ್ದಾರೆ. ಆ ಕುಟುಂಬ ಮನೆಯಿಲ್ಲದೆ ಎಲ್ಲಿ ಹೊಗಬೇಕು ಏನು ಮಾಡಬೇಕು ತಮ್ಮ ಜಾನುವಾರುಗಳ ಕೊಠಡಿ ಸೇರಿ ಇಡೀ ಮನೆಗೆ ಬೀಗ ಹಾಕಿದ್ದಾರೆ. ಮನೆ ಇಲ್ಲದೆ ಪಕ್ಕದ ಮನೆಯಲ್ಲಿ ಹೋಗಿದ್ದಾರೆ. ನಾಚಿಕೆಯಾಗಬೇಕು ಬ್ಯಾಂಕ್ ಸಿಬ್ಬಂದಿಗೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು ಕೊಡಲೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಗಮನಹರಿಸಿ ಆ ಕುಟುಂಬಸ್ಥರಿಗೆ ನ್ಯಾಯ ಕೊಡಿಸಿ ಈ ಭಾಗದಲ್ಲಿ ಕೂಡ ಆನೆಗಳ ಹಾವಳಿ ಇದೆ, ರಾತ್ರಿ ಹೇಗೆ ಮಗಲಬೇಕು? ಆ ಕುಟುಂಬದ ಹೆಣ್ಣು ಮಗುವಿನ ಸೂಕ್ತ ರಕ್ಷಣೆ ಏನು ಎಷ್ಟು ದಿನ ಮನೆಯಿಲ್ಲದೆ ಬೇರೆಯವರ ಮನೆಯಲ್ಲಿಯೇ ಇರುತ್ತಾರೆ. ನಾವಿನ್ನು ಬದುಕಿದ್ದೇವೆ ನಮ್ಮ ರೈತ ಸಂಘ ಅವರಿಗೆ ನ್ಯಾಯ ಸಿಗುವವರೆಗೂ ಜೊತೆಯಲ್ಲಿಯೇ ನಿಲ್ಲುತ್ತೇವೆ. ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲವೆಂದು ಮನೆಯ ಬೀಗ ಒಡೆದು ಕುಟುಂಬಸ್ಥರಿಗೆ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಕೊಡಲೇ ಈಕ್ವಿಟಾಸ್ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆಯ ದಂಪತಿ ಹಾಗೂ ರೈತ ಸಂಘಟನೆಯ ವಿವಿಧ ಮುಖಂಡರು ಕಾರ್ಯಕರ್ತರು ಹಾಜರಿದ್ದರು.