ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕು ಕೇಂದ್ರ ಸ್ಥಾನದಲ್ಲಿ ತಲಾ ಎರಡು ಕೋಟಿ ವೆಚ್ಚದಲ್ಲಿ ಒಂದೊಂದು ಸಮುದಾಯ ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದರ ಅನುದಾನದಲ್ಲಿ ಪಟ್ಟಣದಲ್ಲಿ ಶಿಕ್ಷಕರಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಲು ಕ್ರಮವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅನುದಾನದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಶಿಕ್ಷಕರ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ಪಟ್ಟಣದ ಸಪ್ತಪದಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕೆ.ಚಂದ್ರಶೇಖರ್ ಹಿತೈಷಿ ಬಳಗದಿಂದ ನಡೆದ ನಿವೃತ್ತ ಶಿಕ್ಷಕ ಕೆ.ಚಂದ್ರಶೇಖರ್ (ಗಡ್ಡ) ದಂಪತಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕು ಕೇಂದ್ರ ಸ್ಥಾನದಲ್ಲಿ ತಲಾ ಎರಡು ಕೋಟಿ ವೆಚ್ಚದಲ್ಲಿ ಒಂದೊಂದು ಸಮುದಾಯ ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದರ ಅನುದಾನದಲ್ಲಿ ಪಟ್ಟಣದಲ್ಲಿ ಶಿಕ್ಷಕರಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಲು ಕ್ರಮವಹಿಸಲಾಗಿದೆ. ಶಿಕ್ಷಕರು ಸಭೆ-ಸಮಾರಂಭ, ಕಾರ್ಯಕ್ರಮಗಳನ್ನು ಬೇರೆ ಸಮುದಾಯ ಭವನಗಳನ್ನು ಅವಲಂಭಿಸಬೇಕಾಗಿತ್ತು. ಶಿಕ್ಷಕರ ಸಮುದಾಯ ಭವನ ನಿರ್ಮಾಣವಾದರೆ ಅನುಕೂಲವಾಗಲಿದೆ ಎಂದರು.

ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಸರ್ಕಾರಿ ಶಾಲೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಸಮಾಜ ಸೇವಕ ಅರವಿಂದ್ ರಾಘವನ್ ಅವರಂತಹ ದಾನಿಗಳ ಸಹಾಯದಿಂದ ಶಾಲೆಗಳು, ಅಂಗನವಾಡಿಗಳು ಅಭಿವೃದ್ಧಿಗೊಳ್ಳುತ್ತಿವೆ ಎಂದು ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಅರವಿಂದ್ ರಾಘವನ್ ಅವರಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಜವಾಬ್ದಾರಿಯನ್ನು ಸರ್ಕಾರ ವತಿಯಿಂದ ನೀಡಲು ಕ್ರಮವಹಿಸಲಾಗುವುದು ಎಂದರು.

ಶಿಕ್ಷಕ ಕೆ.ಚಂದ್ರಶೇಖರ್ ಅವರು ಉತ್ತಮ ಸಂಘಟಿಕರಾಗಿದ್ದು, ವೃತ್ತಿಯ ಜೊತೆಗೆ ಶಿಕ್ಷಕರ ಸಮಸ್ಯೆಗಳು, ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದ್ದಾರೆ. ನಾನು ಶಾಸಕನಾಗಿದ್ದಾಗ ಶಿಕ್ಷಕರ ಹಲವು ಸಮಸ್ಯೆಗಳನ್ನು ನನ್ನ ಬಳಿ ಹೊತ್ತು ತಂದು ಬಗೆಹರಿಸುವ ಕೆಲಸ ಮಾಡಿದ್ದಾರೆ. ನಾನು ಸಹ ತಕ್ಷಣವೇ ಸ್ಪಂದಿಸಿ ಶಿಕ್ಷಕರ ಸ್ನೇಹಿಯಾಗಿ ಕೆಲಸ ಮಾಡಿದ್ದೇನೆ ಎಂದರು.

ನಾನು ಶಾಸಕನಾದ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಹೊತ್ತುಕೊಟ್ಟು ಕೆಲಸ ಮಾಡಿದ್ದೇನೆ. ಮೊದಲ ಬಾರಿಗೆ ಶಾಸಕನಾದಾಗ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕ್ಷೇತ್ರಕ್ಕೆ 12 ಹೊಸ ಪ್ರೌಢಶಾಲೆಗಳು, 5 ಪದವಿ ಪೂರ್ವ ಕಾಲೇಜು, 3 ಡಿಗ್ರಿ ಕಾಲೇಜು, ಹೋಬಳಿಗೆ ಮೂರು ಮೂರು ವಸತಿ ಶಾಲೆಗಳನ್ನು ಮಂಜೂರು ಮಾಡಿಸಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕೆ ಪಾಠ ಕಡಿಮೆಯಾಗುತ್ತಿದೆ. ಸರ್ಕಾರಗಳು ಹಾಗೂ ಶಿಕ್ಷಣ ತಜ್ಞರು ಶಿಕ್ಷಣ ಕ್ಷೇತ್ರದಲ್ಲಿ ನೈತಿಕತೆ ಬೆಳೆಸುವ ಸರಿಯಾದ ಶಿಕ್ಷಣ ನೀತಿ ಜಾರಿಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಮಾಜವೇ ಅದೋಗತಿಗೆ ತಲುಪಲಿದೆ ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ನಿವೃತ್ತ ಶಿಕ್ಷಕ ಕೆ.ಚಂದ್ರಶೇಖರ್(ಗಡ್ಡ), ಪತ್ನಿ ಪ್ರೇಮ ಅವರನ್ನು ಎಲ್ಲಾ ಶಿಕ್ಷಕರು, ಹಿತೈಸಿಗಳು ಅಭಿನಂದಿಸಿದರು.

ಸಮಾಜಸೇವಕ ಅರವಿಂದ್ ರಾಘವನ್, ಸ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಮಹದೇವಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮು, ಯುವರಾಜು, ವಿಜಯ್‌ಕುಮಾರ್, ಅಂಚಿಸಣ್ಣಸ್ವಾಮೀಗೌಡ, ಪದ್ಮೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಸುಮಿತ್ರ ಸೇರಿದಂತೆ ಹಲವರು ಶಿಕ್ಷಕರು ಹಾಜರಿದ್ದರು.