ಚಿಕ್ಕಮಗಳೂರು ಕಾಫಿನಾಡಿನ ಪ್ರಮುಖ ಗಣಪತಿಗಳಲ್ಲೊಂದಾದ ಚಿಕ್ಕಮಗಳೂರಿನ ಹಿಂದೂ ಮಹಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶನಿವಾರ ಅದ್ಧೂರಿಯಾಗಿ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗಣನಾಯಕನನ್ನು ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.
ಕೋಟೆ ಕೆರೆ ಕಲ್ಯಾಣಿಯಲ್ಲಿ ಜಲಸ್ತಂಭನ । ಗಣನಾಯಕನಿಗೆ ಭಕ್ತಿಪೂರ್ವಕ ಬೀಳ್ಕೊಡುಗೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡಿನ ಪ್ರಮುಖ ಗಣಪತಿಗಳಲ್ಲೊಂದಾದ ಚಿಕ್ಕಮಗಳೂರಿನ ಹಿಂದೂ ಮಹಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶನಿವಾರ ಅದ್ಧೂರಿಯಾಗಿ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗಣನಾಯಕನನ್ನು ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ಅಲಂಕೃತ ಪ್ರಭಾವಳಿಯಲ್ಲಿ ಕೂರಿಸಿ ಮಂಗಳವಾದ್ಯಗಳೊಂದಿಗೆ ಮಧ್ಯಾಹ್ನ ಮೆರವಣಿಗೆ ಆರಂಭಿಸಲಾಯಿತು. ಕೀಲುಕುದುರೆ, ನಾಸಿಕ್ ಡೋಲ್ ಹಾಗೂ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಸೌಂಡ್ ಸಿಸ್ಟಂ ವ್ಯವಸ್ಥೆ ಮಾಡಲಾಗಿತ್ತು.ಸೌಂಡ್ ಸಿಸ್ಟಂಗೆ ಯುವಕ-ಯುವತಿಯರು ಹೆಜ್ಜೆ ಹಾಕಿದರೆ, ಭಕ್ತರು ಗಣಪತಿ ಘೋಷಣೆ ಹಾಗೂ ಜೈಕಾರದೊಂದಿಗೆ ಸಂಭ್ರಮಿಸಿದರು. ಕೇಸರಿ ಧ್ವಜಗಳನ್ನು ಬೀಸುತ್ತಾ, ತಲೆಗೆ ಕೇಸರಿ ರುಮಾಲು ಧರಿಸಿದ್ದ ಭಕ್ತರು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು. ಹಲವು ಕಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.ಮಲ್ಲಂದೂರು ರಸ್ತೆ, ವಿಜಯಪುರ ಮುಖ್ಯರಸ್ತೆ, ಒಕ್ಕಲಿಗರ ಕಲ್ಯಾಣ ಮಂಟಪ ರಸ್ತೆ, ಆರ್.ಜಿ. ರಸ್ತೆ, ಬಸವನಹಳ್ಳಿ ಶಾಲೆ ರಸ್ತೆ ಮೂಲಕ ಹನುಮಂತಪ್ಪ ವೃತ್ತ ತಲುಪಿದ ಮೆರವಣಿಗೆ ಎಂ.ಜಿ. ರಸ್ತೆಯ ಮೂಲಕ ಕೋಟೆ ಕೆರೆ ತಲುಪಿತು. ಮಾರ್ಗದುದ್ದಕ್ಕೂ ಸ್ಥಳೀಯ ನಿವಾಸಿಗಳು ಗಣಪತಿಗೆ ಪೂಜೆ ಸಲ್ಲಿಸಿ ಹಣ್ಣು-ಕಾಯಿ ಸಮರ್ಪಿಸಿದರು. ಕೆಲವರು ಈಡುಗಾಯಿ ಒಡೆದು ಭಕ್ತಿ ಸಲ್ಲಿಸಿದರು.ಮೆರವಣಿಗೆಯ ಬಳಿಕ ರಾತ್ರಿ 11ರ ಸುಮಾರಿಗೆ ಕೋಟೆ ಕೆರೆಯಲ್ಲಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು.ಹಿಂದೂ ಸಭಾ ಗಣಪತಿ ಸಮಿತಿ ಮುಖಂಡರಾದ ಆಟೋ ಶಿವಣ್ಣ, ಸಂತೋಷ್ ಕೋಟ್ಯಾನ್, ಸುಮಂತ್, ಪ್ರದೀಪ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಪ್ರಮುಖರು ಮೆರವಣಿಗೆಯ ಉಸ್ತುವಾರಿ ವಹಿಸಿದ್ದರು.ಪೂಜೆ ಸಂಪನ್ನ: ಹಿಂದೂ ಮಹಾಗಣಪತಿ 12ನೇ ವರ್ಷದ ಪ್ರತಿಷ್ಠಾಪನೆ ಪ್ರಯುಕ್ತ ಶುಕ್ರವಾರ ಸಂಜೆ ಶ್ರೀಯವರ ಅಭಿಮುಖ ದಲ್ಲಿ ರಂಗಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಹಾಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ಪಟಾಕಿಗಳ ಸದ್ದು: ಮೆರವಣಿಗೆ ಆರಂಭವಾಗುತ್ತಿದ್ದಂತೆ ವಿವಿಧೆಡೆ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹನುಮಂತಪ್ಪ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪಟಾಕಿಗಳ ಸದ್ದು ಮೊಳಗಿತು. ಆಕಾಶದಲ್ಲಿ ಪಟಾಕಿಗಳ ಚಿತ್ತಾರ ಮೂಡಿದರೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರ ಕೇಸರಿಮಯವಾಗಿತ್ತು. ಸ್ಥಳದಲ್ಲಿ ಎಸ್ಪಿ ಮೊಕ್ಕಾಂ: ಶೋಭಾಯಾತ್ರೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ನೇತೃತ್ವದಲ್ಲಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆ ಮೇಲ್ವಿಚಾರಣೆ ನಡೆಸಿದರು.
