City Institute meeting reaches a climax
-ಜಿಲ್ಲಾಧಿಕಾರಿ ಅಂಗಳದಲ್ಲಿ ಚೆಂಡು । ಗೊಂದಲದ ಗೂಡಾದ ಇಡೀ ಜನರಲ್ ಬಾಡಿ ಪ್ರಕ್ರಿಯೆಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ ಚಿತ್ರದುರ್ಗಪ್ರತಿಷ್ಠಿತ ಸಿಟಿ ಇನ್‌ಸ್ಟಿಟ್ಯೂಟ್ ನ ವಾರ್ಷಿಕ ಮಹಾಸಭೆ ಸೆ.27ರಂದು ನಡೆಯುತ್ತಾ ಅಥವಾ ಮುಂದಕ್ಕೆ ಹೋಗುತ್ತಾ ಎಂಬ ಸಂದೇಹ ಭುಗಿಲೆದ್ದಿದ್ದು, ಜಿಲ್ಲಾಧಿಕಾರಿ ಕಡೆ ಎಲ್ಲರ ಚಿತ್ತ ನೆಟ್ಟಿದೆ. ಏತನ್ಮಧ್ಯೆ, ವಾರ್ಷಿಕ ಸಭೆ ಸುಸೂತ್ರ ನಡೆಯಲು ಅಡ್ಡಿಗಳಾಗದಂತೆ ಹೈಕೋರ್ಟ್ ತಡೆ ನೀಡಿದೆ ಎನ್ನಲಾಗಿದ್ದು, ಇಡೀ ಜನರಲ್ ಬಾಡಿ ಪ್ರಕ್ರಿಯೆ ಗೊಂದಲದ ಗೂಡಾಗಿ ಪರಿಣಮಿಸಿದೆ.
ಸಿಟಿ ಇನ್‌ಸ್ಟಿಟ್ಯೂಟ್ ಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಅವರ ಅನುಮತಿ ಇಲ್ಲದೇ ಹಾಗೂ ಅವರ ಗಮನಕ್ಕೆ ಬಾರದಂತೆ ಏನೂ ನಡೆಸುವಂತಿಲ್ಲ. ಈ ನಿಯಮಾವಳಿ ಅರಿತ ಜಿಲ್ಲಾಧಿಕಾರಿ ಹಾಗೂ ಸಂಸ್ಥೆ ಅಧ್ಯಕ್ಷೆ ರಮ್ಯಾ ಅವರು ಸೆ. 25ರ ಶುಕ್ರವಾರ ಸಿಟಿ ಇನ್‌ಸ್ಟಿಟ್ಯೂಟ್ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಕೆಲ ಆಕ್ಷೇಪಣೆ ಎತ್ತಿ ಸಮಜಾಯಿಷಿ ಕೇಳಿದ್ದಾರೆ. ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ.ಸಂಸ್ಥೆಯ 2025-26ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸೆ.27 ರ ಭಾನುವಾರ ಬೆಳಿಗ್ಗೆ10.30 ಕ್ಕೆ ಸಂಸ್ಥೆ ಆವರಣದಲ್ಲಿ ನಿಗದಿಪಡಿಸಿದ ಸಂಗತಿ ತಮ್ಮ ಕಚೇರಿಗೆ ತಲುಪಿಸಲಾದ ಆಹ್ವಾನ ಪತ್ರಿಕೆ ಮೂಲಕ ತಿಳಿದಿದೆ. ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು ಉದ್ದೇಶಿತ ಜನರಲ್ ಬಾಡಿ ನಡೆಸುವ ಸಭೆಗೆ ಅಧ್ಯಕ್ಷರಿಂದ ಅನುಮತಿ ಹಾಗೂ ಕಾರ್ಯಕಾರಿ ಸಮಿತಿ ಅನುಮೋದನೆ ಪಡೆದಿರುವ ಬಗ್ಗೆ ದಾಖಲೆಗಳನ್ನು ಮೂರು ದಿನದ ಒಳಗಾಗಿ ಕಚೇರಿಗೆ ತಲುಪಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಈ ನಡುವೆ, ಏಳು ಮಂದಿ ನಿರ್ದೇಶಕರು ಹಾಗೂ ಖಜಾಂಚಿ ಶನಿವಾರ ಸಂಜೆ ಡಿವೈಎಸ್ಪಿ ಅವರಿಗೆ ದೂರೊಂದನ್ನು ನೀಡಿ ವಾರ್ಷಿಕ ಮಹಾಸಭೆಯನ್ನು ದೌರ್ಜನ್ಯದಿಂದ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಸಂಸ್ಥೆ ಅಧ್ಯಕ್ಷರ ಗಮನಕ್ಕೆ ಬಾರದಂತೆ ಜನರಲ್ ಬಾಡಿ ದಿನಾಂಕ ನಿಗದಿ ಮಾಡಿ ಮುಂದುವರಿಯಲಾಗಿದೆ. ಈ ಸಭೆಗೆ ಸದಸ್ಯರಲ್ಲದ ಪುಡಿ ರೌಡಿಗಳ ಕರೆತಂದು ಗಲಾಟೆ ಮಾಡಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಭೆ ತಡೆಯುವುದು ಸೂಕ್ತ. ತಮ್ಮ ಗಮನಕ್ಕೆ ಬಾರದಂತೆ ಸಭೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದ್ದರೂ ನಿರಾಕರಿಸಲಾಗಿದೆ. ಸಭೆ ನಡೆಸಲು ಕಾರ್ಯದರ್ಶಿಗಳು, ಉಪಾಧ್ಯಕ್ಷರು ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಬಾಕ್ಸ್...ಕೋರಂಗಾಗಿ 100ಕ್ಕೂ ಹೆಚ್ಚು ಮಂದಿಗೆ ಸದಸ್ಯತ್ವ!
ಕಾರ್ಯದರ್ಶಿಗೆ ಸಭೆ ನಡೆಸಲು ಕೋರಂ ಸಿಗುವುದು ಕಷ್ಟ ಸಾಧ್ಯ. ಹಾಗಾಗಿ 100 ಕ್ಕೂ ಹೆಚ್ಚು ಮಂದಿಗೆ ಹೊಸದಾಗಿ ಸದಸ್ಯತ್ವ ನೀಡಿ ಅವರಿಗೆಲ್ಲ ಗುರುತಿನ ಚೀಟಿ ನೀಡಲಾಗಿದೆ. ಅವರೆಲ್ಲ ಸಭೆಗೆ ಆಗಮಿಸಿ ಕೋರಂ ತೋರಿಸುವ ಸಾಧ್ಯತೆ ಇದೆ. ಜನರಲ್ ಬಾಡಿ ಒಪ್ಪಿಗೆ ನೀಡದ ಹೊರತು ಹೊಸ ಸದಸ್ಯರ ಪಟ್ಟಿ ಅಂತಿಮವಾಗುವುದಿಲ್ಲ. ಜನರಲ್ ಬಾಡಿ ನಡೆಸಲು ಇಂತಹ ಹಲವು ಒಳ ಸಂಚುಗಳ ಮಾಡಲಾಗುತ್ತಿದೆ ಎಂದು ನಿರ್ದೇಶಕರು ದೂರಿದ್ದಾರೆ.ಸಂಸ್ಥೆಗೆ ಸಂಬಂಧಿಸಿದಂತೆ ತಕರಾರುಗಳನ್ನು ಸಂಸ್ಥೆ ಕಾರ್ಯದರ್ಶಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಅದಕ್ಕೆ ವಕೀಲರ ಫೀ ಸಂಸ್ಥೆ ಭರಿಸಬೇಕಾಗುತ್ತದೆ. ಸಂಸ್ಥೆ ಅಧ್ಯಕ್ಷರ ವಿರುದ್ಧವೇ ತಡೆಯಾಜ್ಞೆ ತಂದರೆ ಇದರ ಮೊತ್ತ ಯಾರು ಭರಿಸಬೇಕು, ಈ ಬಗ್ಗೆ ಬೈಲಾದಲ್ಲಿ ಏನೂ ಹೇಳಲಾಗಿಲ್ಲವೆಂಬ ಅಚ್ಚರಿಗಳು ಸದಸ್ಯರ ನಡುವೆ ಪ್ರಸ್ತಾಪವಾಗುತ್ತಿವೆ.
-----------------ಪೋಟೋ ಕ್ಯಾಪ್ಸನ್
ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ಕಟ್ಟಡ-----------ಫೋಟೋ: 26 ಸಿಟಿಡಿ 5
--ಸಂಸ್ಥೆ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷೆ ರಮ್ಯ ನೀಡಿರುವ ನೋಟಿಸ್
-----ಪೋಟೋ ಫೈಲ್ ನೇಮ್-26 ಸಿಟಿಡಿ 6--