ಸಂಜೆ ನಂತರವಷ್ಟೇ ಖಾಸಗಿ ಪ್ರ್ಯಾಕ್ಟಿಸ್‌: ಡಾ. ಸಚಿವ ಶರಣಪ್ರಕಾಶ ಪಾಟೀಲ

KannadaprabhaNewsNetwork | Published : Apr 23, 2025 12:33 AM

ಸಾರಾಂಶ

ಆಸ್ಪತ್ರೆಯಲ್ಲಿ ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಔಷಧ ಖರೀದಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಇದಕ್ಕೆ ಸರ್ಕಾರದ ಆದೇಶಕ್ಕೆ ಕಾಯುವ ಅಗತ್ಯ ಇಲ್ಲ. ಔಷಧ ಖರೀದಿಗೆ ರೋಗಿಗಳನ್ನು ಖಾಸಗಿ ಔಷಧ ಅಂಗಡಿಗಳಿಗೆ ಕಳುಹಿಸಬಾರದು.

ಹುಬ್ಬಳ್ಳಿ: ಸರ್ಕಾರಿ ಮೆಡಿಕಲ್‌ ಕಾಲೇಜ್‌ಗಳಲ್ಲಿನ ವೈದ್ಯರು, ಪ್ರಾಧ್ಯಾಪಕರು ಸಂಜೆ ನಾಲ್ಕರಿಂದ ಮಾತ್ರ ಖಾಸಗಿ ಪ್ರ್ಯಾಕ್ಟಿಸ್‌ ಮಾಡಬೇಕು. ಒಂದು ವೇಳೆ ಈ ಸಮಯದಲ್ಲಿ ವೈದ್ಯರು ಆಸ್ಪತ್ರೆಗಳಲ್ಲಿ ಇಲ್ಲದಿದ್ದಲ್ಲಿ ಅವರ ವೇತನ ಕಡಿತಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ಇದೇ ವೇಳೆ ಕೆಎಂಸಿಆರ್‌ಐ ಸೇರಿ ಯಾವುದೇ ಸರ್ಕಾರಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ ಎಂದರು.

ನಗರದ ಕೆಎಂಸಿಆರ್‌ಐಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಬಯೋಮೆಟ್ರಿಕ್ ಆಧರಿಸಿ ವೇತನ ಪಾವತಿ ಮಾಡುವಂತೆ ಸೂಚಿಸಲಾಗಿದೆ. ತಡವಾಗಿ ಕರ್ತವ್ಯಕ್ಕೆ ಹಾಜರಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಔಷಧ ಖರೀದಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಇದಕ್ಕೆ ಸರ್ಕಾರದ ಆದೇಶಕ್ಕೆ ಕಾಯುವ ಅಗತ್ಯ ಇಲ್ಲ. ಔಷಧ ಖರೀದಿಗೆ ರೋಗಿಗಳನ್ನು ಖಾಸಗಿ ಔಷಧ ಅಂಗಡಿಗಳಿಗೆ ಕಳುಹಿಸಬಾರದು. ಯಾವುದೇ ಕಾರಣಕ್ಕೂ ಚೀಟಿ ಬರೆದು ಕೊಡಬಾರದು ಎಂಬ ಸೂಚನೆಯನ್ನೂ ಈಗಾಗಲೇ ನೀಡಲಾಗಿದೆ ಎಂದರು.

ಕೆಎಂಸಿಆರ್‌ಐಗೆ ಅನುದಾನ ಕೊರತೆ ಇಲ್ಲ. ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಅಗತ್ಯತೆಗೆ ಅನುಗುಣವಾಗಿ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಕಾಯಂ ನಿರ್ದೇಶಕರ ನೇಮಕಕ್ಕೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದರು.

ಕೆಎಂಸಿಆರ್‌ಐನಲ್ಲಿ ವೆಚ್ಚ ಹೆಚ್ಚಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ವೆಚ್ಚವನ್ನು ಸರಿದೂಗಿಸಲು ಶೇ. 3 ರಿಂದ 5 ರಷ್ಟು ಚಿಕಿತ್ಸಾ ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯ. ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಇದು ಕಡಿಮೆ. ಸಂಸ್ಥೆ ಸುಸ್ಥಿರವಾಗಬೇಕು, ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕಿಮೊಥೆರಪಿ, ರೇಡಿಯೋ ಥೆರಪಿ ಸೇರಿದಂತೆ ಎಲ್ಲ ಸೌಲಭ್ಯ ಇದೆ. ಯಾವುದೇ ಉಪಕರಣಗಳ ಕೊರತೆ ಇಲ್ಲ ಎಂದರು.

ರಾಜ್ಯದಲ್ಲಿ 5 ಸಾವಿರ ಜನ ಕಿಡ್ನಿ ಕಸಿಗೆ ಮತ್ತು 1000 ಜನ ಯಕೃತ್ ಕಸಿಗೆ ಕಾಯುತ್ತಿದ್ಧಾರೆ. ಆದರೆ, ದಾನಿಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ, ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಪಿಎಂಎಸ್ಎಸ್ವೈ ಸೂಪರಿಂಟೆಂಡೆಂಟ್ ರಾಜಶೇಖರ, ಪ್ರಾಚಾರ್ಯ ಗುರುಶಾಂತಪ್ಪ ಯಲಗಚ್ಚಿನ, ಡಾ. ರಾಜಶೇಖರ ದ್ಯಾಬೇರಿ ಸೇರಿದಂತೆ ಹಲವರಿದ್ದರು.

ಮಲ್ಟಿ ಸ್ಕಿಲ್‌ ಸೆಂಟರ್‌: ಮೈಸೂರು, ಕೊಪ್ಪಳ ಹಾಗೂ ಕಲಬುರಗಿ ಜಿಲ್ಲೆಯ ಸ್ಥಾಪಿಸಲಾಗಿರುವ ಮಲ್ಟಿ ಸ್ಕಿಲ್‌ ಸೆಂಟರ್‌ನಂತೆ ಪ್ರತಿ ಜಿಲ್ಲೆಯಲ್ಲಿ ಮಲ್ಟಿ ಸ್ಕಿಲ್‌ ಸೆಂಟರ್ ಸ್ಥಾಪನೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗುವುದು. ಕಲಿಕೆ ಜೊತೆ ಕೌಶಲ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

Share this article