ಖಾಸಗಿ ಶಾಲೆಗಳಲ್ಲಿ ಸರ್ಕಾರಿ ನಿಯಮ ಮೀರಿ ಶುಲ್ಕ ವಸೂಲಿ

KannadaprabhaNewsNetwork | Published : May 19, 2025 2:07 AM
ದೊಡ್ಡಬಳ್ಳಾಪುರ: ಖಾಸಗಿ ಶಾಲೆಗಳಲ್ಲಿ ಸರ್ಕಾರದ ಮಾನದಂಡವನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ಪಡೆಯುತ್ತಿರುವ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಿಗೆ ಸರ್ಕಾರಿ ಮಾನದಂಡದಲ್ಲಿ ಶುಲ್ಕ ನಿಗದಿಪಡಿಸಲು ಈ ಕೂಡಲೇ ಆದೇಶ ಹೊರಡಿಸುವಂತೆ ಉಪನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಲಾಗಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್ ತಿಳಿಸಿದರು.
Follow Us

ದೊಡ್ಡಬಳ್ಳಾಪುರ: ಖಾಸಗಿ ಶಾಲೆಗಳಲ್ಲಿ ಸರ್ಕಾರದ ಮಾನದಂಡವನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ಪಡೆಯುತ್ತಿರುವ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಿಗೆ ಸರ್ಕಾರಿ ಮಾನದಂಡದಲ್ಲಿ ಶುಲ್ಕ ನಿಗದಿಪಡಿಸಲು ಈ ಕೂಡಲೇ ಆದೇಶ ಹೊರಡಿಸುವಂತೆ ಉಪನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಲಾಗಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025- 26ನೇ ಸಾಲಿನ ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಸರ್ಕಾರದ ಮಾನದಂಡದ ಪ್ರಕಾರ ಶುಲ್ಕ ಪಡೆದುಕೊಳ್ಳದೆ ತಮಗಿಷ್ಟ ಬಂದಂತೆ ವಾರ್ಷಿಕ ಶುಲ್ಕ ₹25 ಸಾವಿರದಿಂದ ₹1 ಲಕ್ಷದವರೆಗೂ ವಸೂಲಿ ಮಾಡಿ ಶಾಲಾ ಶಿಕ್ಷಣವನ್ನು ದಂಧೆ ಮಾಡಿಕೊಂಡಿದ್ದಾರೆ. ಇದಲ್ಲದೆ ಪುಸ್ತಕ, ಸಮವಸ್ತ್ರಕ್ಕೆಂದು ಸಾಕಷ್ಟು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಇಲ್ಲ. ಏಕೆಂದರೆ ಕೆಲವರು ಶಾಲೆಗಳಲ್ಲಿ ಪಾಠ ಮಾಡದೆ ಹಾಜರಾತಿಗೆ ಸಹಿ ಮಾಡಿ, ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರಿ ಅಧಿಕಾರಿಗಳು, ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವ್ಯಾಪಾರಕ್ಕೆ ಇಳಿದಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದೆ. ಬಡವರು, ಮಧ್ಯಮ ವರ್ಗದವರು, ನೇಕಾರರು, ರೈತ, ಕಾರ್ಮಿಕರು ಮತ್ತು ಎಲ್ಲಾ ರೀತಿಯ ಶ್ರಮಿಕ ವರ್ಗದ ಜನರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬುದು ಅವರ ಹೆಬ್ಬಯಕೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಹಾಗಾಗಿ ತಳ ಸಮುದಾಯಗಳ ಆರ್ಥಿಕ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು ದುಬಾರಿ ಬೆಲೆಗಳನ್ನು ತೆತ್ತು ಜೀವನ ಸಾಗಿಸುವುದೇ ಕಷ್ಟವಾಗಿದೆ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಸಾಲ ಸೋಲ ಮಾಡಿ ತಮ್ಮಲ್ಲಿರುವ ಚೂರು ಪಾರು ಒಡವೆಗಳನ್ನು ಅಡವಿಟ್ಟು ಶಾಲೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳು ಸರ್ಕಾರಿ ಮಾನದಂಡದಲ್ಲಿ ಶುಲ್ಕ ಪಡೆದುಕೊಳ್ಳದೆ ನಿಯಮಗಳನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಪೋಷಕರು ಶುಲ್ಕ ಕಟ್ಟಲು 2- 3 ದಿನ ಅಥವಾ ಒಂದು ವಾರ ತಡವಾದರೂ ಮಕ್ಕಳನ್ನು ಶಾಲೆಯ ಹೊರಗೆ ನಿಲ್ಲಿಸುವ ಮಟ್ಟಕ್ಕೆ ಖಾಸಗಿ ಶಾಲೆಗಳವರು ಇಳಿದಿರುವುದು ದೊಡ್ಡ ದುರಂತ, ಇದರಿಂದ ಬಡವರು, ಮಧ್ಯಮ ವರ್ಗದವರು, ನೇಕಾರರು, ರೈತ ಕಾರ್ಮಿಕರು ಮತ್ತು ಎಲ್ಲಾ ರೀತಿಯ ಶ್ರಮಿಕ ವರ್ಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಅಲ್ಪ ಸಂಖ್ಯಾತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ದುಡಿಮೆಯ ಅರ್ಧದಷ್ಟು ಪಾಲನ್ನು ದುಬಾರಿ ಶುಲ್ಕ ಪಾವತಿಸಿ ಶಿಕ್ಷಣ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಎಲ್ಲ ಖಾಸಗಿ ಶಾಲೆಗಳಿಗೆ ಸರ್ಕಾರಿ ಮಾನದಂಡ ಅಳವಡಿಸಿಕೊಂಡು ಶುಲ್ಕ ಪಡೆಯಲು ಆದೇಶ ಹೊರಡಿಸಬೇಕೆಂದು ಮತ್ತು ತಪ್ಪಿದಲ್ಲಿ ಅವರಿಗೆ ಶಾಲೆಗಳನ್ನು ನಡೆಸಲು ಕೊಟ್ಟಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಕನ್ನಡ ಪಕ್ಷ ಆಗ್ರಹಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಅಧ್ಯಕ್ಷ ಡಿ.ವೆಂಕಟೇಶ್, ಗೌರವಾಧ್ಯಕ್ಷ ರಂಗಣ್ಣ, ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಪರಮೇಶ್ ವೆಂಕಟಪ್ಪ. ಅಂಜನ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

18ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನೀತಿ ವಿರೋಧಿಸಿ ಕನ್ನಡ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್‌ ಮಾತನಾಡಿದರು.