ಕನ್ನಡಪ್ರಭ ವಾರ್ತೆ, ದಾವಣಗೆರೆ
ಉತ್ತಮ ಸೇವೆ ಮತ್ತು ದೇಶದ ಅಭಿವೃದ್ಧಿ ಹಿತದೃಷ್ಠಿಯಿಂದ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಅಥವಾ ಅಧಿಕಾರ ವಿಕೇಂದ್ರೀಕರಣ ಉತ್ತಮ ನಿರ್ಧಾರ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಅಭಿಪ್ರಾಯಿಸಿದರು.ಶನಿವಾರ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಸಹಕಾರ ಇಲಾಖೆ ವತಿಯಿಂದ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೆಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಣ್ಣ ಹಣಕಾಸಿನ ವ್ಯವಹಾರಕ್ಕೂ ಇಡೀ ದಿನ ಕಾಯಬೇಕಾದ ಸ್ಥಿತಿ ಇದೆ. ಗ್ರಾಹಕರ ಸಮಸ್ಯೆಗಳಿಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಈ ರೀತಿಯ ಸಮಸ್ಯೆಗಳನ್ನು ದಾವಣಗೆರೆ ಸೇರಿದಂತೆ ದೇಶದ ಎಲ್ಲ ಕಡೆಗಳಲ್ಲಿ ಜನರು ನಿತ್ಯ ಅನುಭವಿಸುತ್ತಿದ್ದಾರೆ. ಅದೇ ಖಾಸಗಿ ಬ್ಯಾಂಕುಗಳಲ್ಲಿ ಸೌಹಾರ್ದಯುತ ವಾತಾವರಣವಿದೆ. ಗ್ರಾಹಕರ ಕೆಲಸಗಳು ತ್ವರಿತವಾಗಿ ನಡೆಯುತ್ತವೆ ಎಂದರು.ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸರಿಯಾದ ತರಬೇತಿ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ಬ್ಯಾಂಕ್ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಿದ್ದೇ ಆದಲ್ಲಿ ದೇಶದ ಆರ್ಥಿಕತೆ ಸಮೃದ್ಧಿಯಾಗಿ ಬೆಳೆಯಲಿದೆ. ಸಹಕಾರಿ ಕ್ಷೇತ್ರದಿಂದ ಮಾತ್ರವೇ ದೇಶದ ಪ್ರಗತಿ ಸಾಧ್ಯ ಎಂದು ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮನಗಂಡಿದ್ದರು. ಅದರ ಪರಿಣಾಮವಾಗಿ ಇಂದು ಕೇಂದ್ರ ಸರ್ಕಾರ ಗ್ರಾಮಮಟ್ಟದಿಂದಲೂ ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಆರ್.ರಾಮರೆಡ್ಡಿ ಮಾತನಾಡಿ, ಗ್ರಾಹಕರ ಜೊತೆಗಿನ ಉತ್ತಮ ವ್ಯವಹರಿಸುವಿಕೆ ಕೂಡ ಬ್ಯಾಂಕು ಮತ್ತು ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂಥ ಮೂಲ ತತ್ವಗಳನ್ನು ಈ ರೀತಿಯ ತರಬೇತಿಗಳು ಕಲಿಸಿಕೊಡುತ್ತವೆ ಎಂದರು.ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಷ್ಟೇ ತರಬೇತಿ ಪಡೆದರೂ ಸಾಲದು. ಬ್ಯಾಂಕ್ ಮತ್ತು ಸಹಕಾರಿ ಕ್ಷೇತ್ರದಲ್ಲಿ ನಿತ್ಯ ಆಗುತ್ತಿರುವ ಹೊಸ ಬದಲಾವಣೆಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬ ಸಿಬ್ಬಂದಿ ಸದಾ ಉತ್ಸುಕರಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಇಂದು ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಯುವುದು ಹೇಗೆ ಹಾಗೂ ಅಂಥವುಗಳು ನಡೆಯದಂತೆ ನೋಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಬ್ಯಾಂಕ್ ಮತ್ತು ಸಹಕಾರ ಸಂಘಗಳ ಸಿಬ್ಬಂದಿ ಆದ್ಯ ಕರ್ತವ್ಯವಾಗಿದೆ. ಈ ರೀತಿಯ ತರಬೇತಿಗಳಿಂದ ವಂಚನೆಗಳನ್ನು ತಡೆಯಲು ಸಾಧ್ಯ ಎಂದರು.ಸಹಕಾರ ಯೂನಿಯನ್ ಉಪಾಧ್ಯಕ್ಷ ಬೇತೂರು ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಕುಮಾರ್, ಡಿ.ಎಂ. ಮುರುಗೇಂದ್ರಯ್ಯ ಇತರರು ಉಪಸ್ಥಿತರಿದ್ದರು. ಧಾರವಾಡದ ಸಂಪನ್ಮೂಲ ವ್ಯಕ್ತಿ ಮಹೇಶ್ ಮಾಶಾಳ ಅವರು ಜೀವನ ಕೌಶಲ್ಯ ಮತ್ತು ವೃತ್ತಿ ನಿರ್ವಹಣೆ ಪ್ರೇರಣೆ ಕುರಿತು ನೀಡಿದ ತರಬೇತಿ ಗಮನ ಸೆಳೆಯಿತು. ಸೈಬರ್ ಸೆಕ್ಯೂರಿಟಿ ಕುರಿತ ಕೆ.ಎಸ್. ಮಹಾದೇವಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.