ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ- 2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ಚೇತನರು ಎಂದಾಕ್ಷಣ ಕೈಲಾಗದವರು ಎಂರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ಸೋಮಾರಿಗಳಾಗದೇ ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು. ಶೇ.75ಕ್ಕೂ ಹೆಚ್ಚು ವಿಕಲಾಂಗರಾದ ಎಷ್ಟೋ ಮಂದಿ ಕೆಎಎಸ್, ಐಎಎಸ್ ಉನ್ನತ ಹುದ್ದೆ ಅಲಂಕರಿಸಿದ್ದು ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಅಂತಹ ಜೀವನಾದರ್ಶಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡರೆ ಜೀವನದಲ್ಲಿ ಸಾಧನೆಯೇ ನಿಮ್ಮನ್ನು ಹಿಂಬಾಲಿಸುತ್ತದೆ ಎಂದರು.ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ನಾನು ಶಾಸಕನಾದ ನಂತರ ತಮಗೆ ಮೀಸಲಿರಿಸಿದ ಶೇ.5ರ ಅನುದಾನದಲ್ಲಿ 20 ತ್ರಿ-ಚಕ್ರ ವಾಹನಗಳನ್ನು ವಿತರಣೆ ಮಾಡಿದ್ದೇನೆ. ರಾಜ್ಯ ಸರ್ಕಾರ ತಮಗೆ ಸವಲತ್ತು ಮತ್ತು ವಿಶೇಷ ಸಾಲ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಸದುಪಯೋಗಪಡಿಸಿ ಕೊಂಡು ಸ್ವಾವಲಂಬಿ ಬದುಕು ಸಾಧಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ವಿ. ಜ್ಯೋತಿ ಮಾತನಾಡಿ, ಜಿಲ್ಲೆಯಲ್ಲಿ 19,183 ವಿಕಲಚೇತನರಿದ್ದು, ಅವರಲ್ಲಿ 16,644 ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸಿಗುತ್ತಿದೆ. 15,012 ಯುಡಿಐಡಿ ಕಾರ್ಡ್ ವಿತರಣೆ ಆಗಿದೆ. ಮಾಸಿಕ ಪೋಷಣಾ ಭತ್ಯೆ, ಸಾರಿಗೆ ಇಲಾಖೆಯ ಮುಖಾಂತರ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ, ಶೇ. 5ರ ಮೀಸಲಾತಿ ಅನುದಾನ ಬಳಕೆ ಹಾಗೂ ವಿವಿಧ ಇಲಾಖೆಗಳ ಮೂಲಕ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಡಿಸಿ - ಸಿಇಒ ವಿರುದ್ಧ ಶಾಸಕರ ಅಸಮಾಧಾನ:
‘ವಿಶೇಷ ಚೇತನರಿಗೆ ಮೀಸಲಿಟ್ಟಿರುವ ಅನುದಾನವನ್ನು ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿಲ್ಲ. ಈ ಬಗ್ಗೆ ನಿಮಗೆ ತಪ್ಪು ಮಾಹಿತಿ ಬೇಡ. ನಾವು ನಿಮ್ಮ ಅನುದಾನವನ್ನು ನಿಮ್ಮ ಕಲ್ಯಾಣ ಕಾರ್ಯಕ್ರಮಗಳಿಗಷ್ಟೆ ಬಳಸುತ್ತಿದ್ದೇವೆ, ನಿಮ್ಮ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ.’
ಇಕ್ಬಾಲ್ ಹುಸೇನ್,ಶಾಸಕ