ಪ್ರಚಾರಕ್ಕಾಗಿ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್‌ ಹೇಳಿಕೆ: ಸಚಿವ ಜೋಶಿ

KannadaprabhaNewsNetwork |  
Published : Oct 24, 2025, 01:00 AM IST

ಸಾರಾಂಶ

ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌ಎಸ್‌ ಪಥಸಂಚನಲ ನಡೆಸಲು ಅವಕಾಶ ನೀಡುವಂತೆ ಅವಕಾಶ ಕೇಳಿದೆ. ಅದೇ ದಿನ ಡಾ. ಅಂಬೇಡ್ಕರ್‌ ಹೆಸರಲ್ಲಿ ಭೀಮ್‌ ಆರ್ಮಿ ರ್‍ಯಾಲಿ ನಡೆಸಲು ಮುಂದಾಗಿರುವುದನ್ನು ನಾವೇ ಸ್ವಾಗತಿಸುತ್ತೇವೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ:

ಪ್ರಚಾರಕ್ಕಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಚಿತ್ತಾಪುರದಲ್ಲಿ ನ. 2ರಂದು ಪಥಸಂಚಲನ ನಡೆಸಲು ಅವಕಾಶ ಕೇಳಲಾಗಿದೆ. ಭೀಮ್‌ ಆರ್ಮಿಯೂ ಅಂದೇ ಅವಕಾಶ ಕೋಡುವಂತೆ ಕೇಳಿದೆ. ಇದಕ್ಕೆ ನಮ್ಮ ತಕರಾರಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಹಾರ್ದಯುತವಾಗಿ ಮೆರವಣಿಗೆ ಮಾಡಲು ಎಲ್ಲ ಸಂಘಟನೆಗಳಿಗೂ ಹಕ್ಕಿದೆ. ಭೀಮ್‌ ಆರ್ಮಿ ರ್‍ಯಾಲಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಡಾ. ಅಂಬೇಡ್ಕರ್‌ ಹೆಸರಲ್ಲಿ ರ್‍ಯಾಲಿ ಮಾಡುವುದಕ್ಕೆ ಸ್ವಾಗತವಿದೆ ಎಂದ ಅವರು, ಯಾರಿಗೆ, ಯಾವತ್ತು ಅನುಮತಿ ಕೊಡಬೇಕು ಎನ್ನುವುದನ್ನು ಜಿಲ್ಲಾಡಳಿತ ನಿರ್ಧರಿಸಲಿ. ಜಿಲ್ಲಾಡಳಿತ ಅನುಮತಿ ಕೊಟ್ಟ ದಿನದಂದು ಆರ್‌ಎಸ್‌ಎಸ್ ಪಥ ಸಂಚಲನ ನಡೆಸಲಿದೆ ಎಂದು ತಿಳಿಸಿದರು. ಸಚಿವ ಪ್ರಿಯಾಂಕ್‌ ಖರ್ಗೆ ಉದ್ದೇಶವೇ ಬೇರೆ ಇದೆ. ಹೀಗಾಗಿ ಅವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಪ್ರಚಾರ ಪಡೆಯಲು ಆರ್‌ಎಸ್‌ಎಸ್‌ ಬಗ್ಗೆ ಇಲ್ಲ-ಸಲ್ಲದ ಹೇಳಿಕೆ ನೀಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಆರ್‌ಎಸ್‌ಎಸ್ ಮತ್ತು ಭೀಮ್ ಆರ್ಮಿ ಒಂದಕ್ಕೊಂದು ಪೈಪೋಟಿ ನಡೆಸಿಲ್ಲ. ಇಬ್ಬರೂ ಸೌಹಾರ್ದತೆಯಿಂದ ರ್‍ಯಾಲಿ ಮಾಡಲಿ ಎಂದು ಸಲಹ ನೀಡಿದರು.

ಮರ್ಯಾದೆ ಬಿಟ್ಟು ಸಿದ್ದು ಮಾತು:

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಮಾತನಾಡುತ್ತಿದ್ದಾರೆ. ಜಿಎಸ್‌ಟಿ ವಿಚಾರದಲ್ಲಿ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇವರ ಕಾಲದಲ್ಲಿ ಶೇ. 12 ತೆರಿಗೆ ಮತ್ತು 17ಸೆಸ್‌ಗಳಿದ್ದವು. ಅದನ್ನು ಮರೆತ್ತಿದ್ದಾರೆ. ವಯಸ್ಸಿನ ಕಾರಣಕ್ಕೆ ಅವರಿಗೆ ಮರುವಾಗಿರಬಹುದು. ಕಾಂಗ್ರೆಸ್ ಕಾಲದಲ್ಲಿ ಶೇ. 30ರಷ್ಟು ತೆರಿಗೆ ಇತ್ತು. ಇದೀಗ ಜಿಎಸ್‌ಟಿ ಇಳಿಸಿದ್ದಕ್ಕೂ ರಾಜ್ಯ ಸರ್ಕಾರ ವಿರೋಧಿಸಿತು. ಎನ್‌ಡಿಎಯೇತರ ರಾಜ್ಯ ಸರ್ಕಾರಗಳ ಜತೆ ಸೇರಿ ವಿರೋಧ ಮಾಡಿತು. ಜನ ನಿಮ್ಮನ್ನು ಒಪ್ಪಿಕೊಳ್ಳದ ಪರಿಣಾಮ ಅನಿವಾರ್ಯವಾಗಿ ಒಪ್ಪಿಕೊಂಡಿದ್ದೀರಿ. ಈಗ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಬಿಜೆಪಿ-ಜೆಡಿಎಸ್‌ ಮಧ್ಯೆ ಭಿನ್ನಾಭಿಪ್ರಾಯವಿಲ್ಲ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಸಚಿವ ಪ್ರಹ್ಲಾದ ಜೋಶಿ, ವಿಜಯೇಂದ್ರ ಮತ್ತು ಎಚ್‍ಡಿಕೆ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬಾರದು ಎಂದರು. ಕುಮಾರಸ್ವಾಮಿ ಅವರ ಆರೋಗ್ಯ ಸರಿ ಇರಲಿಲ್ಲ. ಆರೋಗ್ಯ ವಿಚಾರಿಸಲು ಮತ್ತು ದೀಪಾವಳಿ ಹಿನ್ನೆಲೆಯಲ್ಲಿ ಭೇಟಿಯಾಗಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮನ್ವಯದ ಕೊರತೆಯೂ ಇಲ್ಲ. ಕೇಂದ್ರದ ಜೊತೆ ಜಗಳವಿದ್ದರೆ ಕೇಂದ್ರದವರೇ ಮಾತನಾಡುತ್ತಾರೆ. ಭಿನ್ನಾಭಿಪ್ರಾಯವಿದೆ ಎನ್ನುವುದೆಲ್ಲವೂ ಊಹಾಪೋಹಾ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕೆಂಬ ಕುಮಾರಸ್ವಾಮಿ ಹೇಳಿಕೆಗೆ ನನ್ನ ಸಹಮತವಿದೆ ಎಂದು ಜೋಶಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!