ಕೋವಿಡ್‌ ಕೇಸ್‌ ಮುಚ್ಚಿಹಾಕಲು ಪ್ರಿಯಾಂಕ್‌ ಖರ್ಗೆ ತೇಜೋವಧೆ: ಜಂಝೀರೆ

KannadaprabhaNewsNetwork |  
Published : Jan 08, 2025, 12:17 AM IST
ಚಿತ್ರ 7ಬಿಡಿಆರ್‌4ಬೀದರ್‌ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಪ್ರದೀಪ ಜಂಝೀರೆ ಅವರು ಬಿಜೆಪಿಯ ಆರ್‌ ಅಶೋಕ ಅವರು ಪಿಎಸ್‌ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಜೊತೆಗೆ ಪ್ರತಿಭಟನೆಯಲ್ಲಿ ತೊಡಗಿದ್ದ ಫೋಟೋ ಪ್ರದರ್ಶಿಸಿದರು. | Kannada Prabha

ಸಾರಾಂಶ

ಜ.9ರಂದು ವಿವಿಧ ದಲಿತ ಪರ ಸಂಘಟನೆಗಳು ಬೀದರ್‌ ಬಂದ್‌ಗೆ ಕರೆ ನೀಡಿರುವುದಕ್ಕೆ ನಮ್ಮ ದಲಿತ ಛಲವಾದಿ ಮಹಾಸಭೆಯ ಸಂಪೂರ್ಣ ಬೆಂಬಲವಿದೆ. ಎಂದು ಪ್ರದೀಪ್ ಜಂಝೀರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಆಡಳಿತದ ಸರ್ಕಾರ ಮಾಡಿದ ಕೋಟ್ಯಂತರ ರುಪಾಯಿ ಹಗರಣಗಳ ಕುರಿತು ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶ್ನೆ ಮಾಡಿದ್ದರಿಂದ ಅವರ ತೇಜೋವಧೆ ಮಾಡಲು ಗುತ್ತಿಗೆದಾರ ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯ ದ್ವೇಷಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಪ್ರದೀಪ ಆರೋಪಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರನ್ನು ಬಿಜೆಪಿ ಖರ್ಗೆ ಕುಟುಂಬವನ್ನು ಗುರಿ ಮಾಡಲೆಂದೇ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಾರಾಯಣಸ್ವಾಮಿ ನಿಜವಾದ ಛಲವಾದಿ ಅಲ್ಲ, ಅವರು ಚೌಧರಿ ಆಗಿದ್ದಾರೆ, ಛಲವಾದಿಗಾಗಲಿ, ಸಮುದಾಯಕ್ಕಾಗಲಿ ಒಂದೇ ಒಂದು ಕೆಲಸ ಮಾಡಿದ್ದನ್ನು ಸಾಬೀತುಪಡಿಸಲಿ ಎಂದವರು ಕಿಡಿಕಾರಿದರು.

ಕೋವಿಡ್‌ ಕೇಸಲ್ಲಿ ಬಿಎಸ್‌ವೈ ಹೆಸರು:

ಕೋವಿಡ್‌ ಹಗರಣ ಹಾಗೂ ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ವೈ ಹೆಸರು ಕೇಳಿ ಬಂದಿರುವದರಿಂದ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಸಚಿನ ಪಂಚಾಳ ಒಬ್ಬ ಗುತ್ತಿಗೆದಾರ ಹೌದೋ ಇಲ್ಲವೋ ಎಂಬುವದು ಗುಪ್ತವಾಗಿದೆ. ಈಗಾಗಲೇ ಸಿಐಡಿ ತನಿಖೆಯಾಗುತ್ತಿದೆ, ಆದರೆ ಇದರ ಮೇಲೆ ನಂಬಿಕೆ ಇಲ್ಲದೆ ಸಿಬಿಐಗೆ ವಹಿಸಿ ಎನ್ನುವುದು ಎಷ್ಟು ಸೂಕ್ತ ಎಂದು ಪ್ರದೀಪ ಪ್ರಶ್ನಿಸಿದರು. ಖರ್ಗೆ ಕುಟುಂಬದ ಆಶೀರ್ವಾದದಿಂದ ಎಲ್ಲಾ ರೀತಿಯ ಅಧಿಕಾರ ಅನುಭವಿಸಿದ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಖರ್ಗೆ ಕುಟುಂಬದ ವಿರುದ್ಧ ಮಾತನಾಡಲೆಂದೇ ಬಿಜೆಪಿಯವರು ಬಳಸಿಕೊಳ್ಳುತ್ತಿರುವುದು ದುರಂತದ ಸಂಗತಿ. ಒಟ್ಟಿನಲ್ಲಿ ಕೋವಿಡ್‌ ಹಗರಣ ಮುಚ್ಚಿಹಾಕಲು ಪ್ರಿಯಾಂಕ ಹೆಸರು ಮುನ್ನೆಲೆಗೆ ತರುತ್ತಿರುವುದು ಖಂಡನೀಯ ಎಂದರು.

ದಿವ್ಯಾ ಹಾಗರಗಿ ಜೊತೆ ಆರ್‌.ಅಶೋಕ

ಬಿಜೆಪಿಯವರು ತಮ್ಮ ಹಿನ್ನಲೆಯನ್ನೊಮ್ಮೆ ನೋಡಿಕೊಳ್ಳಲಿ. ಇತ್ತೀಚೆಗೆ ಪ್ರಿಯಾಂಕ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಯವರು ನಡೆಸಿದ ಪ್ರತಿಭಟನೆಯಲ್ಲಿ ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಎಂದೇ ಕುಖ್ಯಾತರಾದ ದಿವ್ಯಾ ಹಾಗರಗಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಜೊತೆಗೆ ಸೇರಿ ಧರಣಿಯಲ್ಲಿ ಪಾಲ್ಗೊಂಡಿದ್ದು ನೋಡಿದರೇ ಗೊತ್ತಾಗುತ್ತೆ ಕಮಲ ಪಾಳಯದವರು ಎಂಥವರು ಎಂದು ಪ್ರದೀಪ ಜಂಝೀರೆ ವ್ಯಂಗ್ಯವಾಡಿದರು.ಬೀದರ್‌ ಬಂದ್‌ಗೆ ಬೆಂಬಲ

ಜ.9ರಂದು ವಿವಿಧ ದಲಿತ ಪರ ಸಂಘಟನೆಗಳು ಬೀದರ್‌ ಬಂದ್‌ಗೆ ಕರೆ ನೀಡಿರುವುದಕ್ಕೆ ನಮ್ಮ ದಲಿತ ಛಲವಾದಿ ಮಹಾಸಭೆಯ ಸಂಪೂರ್ಣ ಬೆಂಬಲವಿದೆ. ಎಂದು ಪ್ರದೀಪ್ ಜಂಝೀರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಹಿಂದ ಒಕ್ಕೂಟದ ಜಿಲ್ಲಾಧ್ಯಕ್ಷ ತುಕಾರಾಮ ಚಿಮಕೊಡ ಸುದ್ದಿಗೋಷ್ಠಿಯಲ್ಲಿದ್ದರಸಚಿನ್‌ ಪ್ರಕರಣದಲ್ಲಿ ಸಚಿವ ಖರ್ಗೆಯನ್ನು ಗುರಿಯಾಗಿಸಿದರೆ ಬಿಜೆಪಿಗೆ ತಕ್ಕಪಾಠ: ಕಾಂಟೆ

ಬೀದರ್‌: ಪ್ರಭಾವಿ ನಾಯಕ ಪ್ರಿಯಾಂಕ ಖರ್ಗೆ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವ ಬಿಜೆಪಿಯ ವ್ಯವಸ್ಥಿತ ಸಂಚನ್ನು ದಲಿತ ವಿದ್ಯಾರ್ಥಿ ಪರಿಷತ್‌ ಖಂಡಿಸುತ್ತದೆ ಎಂದು ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ್ದು, ಯುವಕ ಸಹೋದರ ಸಚಿನ್‌ ಪಂಚಾಳ ಪ್ರಕರಣ ಖಂಡನೀಯ ಅದನ್ನು ರಾಜ್ಯ ಸರ್ಕಾರ ಗಂಭಿರವಾಗಿ ಪರಿಗಣಿಸಿ, ಪ್ರಕರಣ ದಲ್ಲಿ ಭಾಗಿಯಾದ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಚಿನ್‌ ಪಂಚಾಳ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಿ ಕೊಡ ಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಸಮಿತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ ಎಂದಿದ್ದಾರೆ.

ಬಿಜೆಪಿಯು ದಲಿತ ನಾಯಕ ಪ್ರಿಯಾಂಕ ಖರ್ಗೆ ಹಾಗೂ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತವಾದ ಷಡ್ಯಂತ್ರ ರೂಪಿಸಿದಂತೆ ವರ್ತಿಸುತ್ತಿರುವುದು ನಾಡಿನ ದಲಿತ ಸಮುದಾಯ ಗಂಭೀರವಾಗಿ ಗಮನಿಸುತ್ತಿದೆ, ಸಚಿನ್‌ ಪ್ರಕರಣದಲ್ಲಿ ಪ್ರಿಯಾಂಕ್‌ ಖರ್ಗೆರನ್ನು ವಿನಾಕಾರಣ ಗುರಿ ಮಾಡಿದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಕಾಂಟೆ ಎಚ್ಚರಿಸಿದ್ದಾರೆ.

PREV

Recommended Stories

‘ಕನ್ನಡ ಸಂಘ ಬಹರೈನ್‌’ಗೆ ಸರ್ಕಾರದಿಂದ ₹1 ಕೋಟಿ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ