ಕಾರಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಭ್ರಷ್ಟಾಚಾರ ಮುಂದುವರಿದಿದ್ದು, ನಮ್ಮ ಪಾದಯಾತ್ರೆ ಮುಗಿಯುವುದರೊಳಗೆ ಕೆಪಿಎಸ್‌ಸಿ ಹಗರಣದಿಂದ ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಶೀಘ್ರದಲ್ಲಿಯೇ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ನೇರವಾಗಿ ಆರೋಪಿಸಿದ್ದಾರೆ.
ಗೃಹ ಸಚಿವ ಖರ್ಗೆ ಕೂಡಾ ಮುಂದೊಂದು ದಿನ ಜೈಲಿಗೆ ಹೋಗುತ್ತಾರೆ. ಭ್ರಷ್ಟಾಚಾರ ನಡೆಯುತ್ತಿದ್ದರೂ ಪೊಲೀಸರು ಕಾನೂನು ಪಾಲನೆ ಮಾಡುತ್ತಿಲ್ಲ ಎಂದರು.
ಮುಖ್ಯಮಂತ್ರಿಯವರೇ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನೀರು ಕೇಳ್ತಿವಿ ಅದನ್ನು ಕೊಡ್ರಿ. ನವಲಿ ಜಲಾಶಯ ಎಲ್ಲಿ ಹೋಯ್ತು. ರೈತರು ಕಷ್ಟದಲ್ಲಿದ್ದಾರೆ, ಗುಳೆ ಹೋಗುತ್ತಿದ್ದಾರೆ. ವಿಜಯೇಂದ್ರ ಹೋರಾಟಕ್ಕೆ ಮಣಿದು ಕಾರಟಗಿಯನ್ನು ಬರಪೀಡಿತ ಎಂದೂ ಘೋಷಣೆ ಮಾಡಿದ್ದಾರೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರಿಗೆ ಎರಡು ಬೆಳೆಗೆ ನೀರು ಬೇಕಾದರೆ ನವಲಿ ಜಲಾಶಯ ಆಗಬೇಕಾದ್ರೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಸರಕಾರ ಗೂಟ ಹೊಡೆದುಕೊಂಡು ಕುಳಿತಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಿರಲ್ಲ ನಾಳೆ ನಮ್ಮ ಸರಕಾರ ಬಂದಾಗ ನಾವು ನೋಡುತ್ತೇವೆ ಎಂದರು.ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೆಟ್ ಕಿತ್ತಾಗ ಸರಿಯಾದ ಸಮಯಕ್ಕೆ ರಿಪೇರಿ ಮಾಡಿದ್ದರೆ ಇವತ್ತು ರೈತರು ಬೆಳೆಗಳಿಗೆ ನೀರು ಇಲ್ಲದೇ ಪರದಾಟ ಪಡುವ ಸ್ಥಿತಿ ಬರುತ್ತಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕನಕಗಿರಿ ಕ್ಷೇತ್ರದಲ್ಲಿ ರೈಸ್ ಪಾರ್ಕ್ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಚೇಲಾಗಳು ಮರಳು ಲೂಟಿ ಮಡುತ್ತಿದ್ದಾರೆ. ಓಣಿ ಓಣಿ ಗಳಲ್ಲಿ ಮಟ್ಕಾ, ಪಾನ್ ಶಾಪ್ ನಲ್ಲಿ ಮದ್ಯ ಮಾರಾಟ, ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಈ ಜಿಲ್ಲಾ ಮಂತ್ರಿಗೂ ಮೂರು ಕೊಂಬು ಬಂದಿವೆ. ಅವರಿಗೊಂದು ಕಾನೂನು, ನಮಗೊಂದು ಕಾನೂನು ಇದೆಯಾ ಎಂದು ಪೊಲೀಸರ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ತಿಪ್ಪರಾಜು ಹವಲ್ದಾರ್, ಬಂಗಾರು ಹನುಮಂತು, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ನಾಗರಾಜ ಬಿಲ್ಗಾರ್, ತಿಪ್ಪೇರುದ್ರಸ್ವಾಮಿ ಇನ್ನಿತರರು ಇದ್ದರು.