ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಮಹಾಲಕ್ಷ್ಮೀ ಸರ್ಕಲ್ನಿಂಜದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್ಯಾಾಲಿ ನಡೆಸಿ ನಂತರ ತಹಸೀಲ್ದಾರ್ ಶ್ವೇತಾ ಅಮರಾವತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಟ್ಟಿಹಳ್ಳಿ: ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಮಹಾಲಕ್ಷ್ಮೀ ಸರ್ಕಲ್‍ನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ನಂತರ ತಹಸೀಲ್ದಾರ್ ಶ್ವೇತಾ ಅಮರಾವತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ರುದ್ರಗೌಡ ಪಾಟೀಲ್ ಮಾತನಾಡಿ, ಅವಳಿ ತಾಲೂಕಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಬೆಳೆದ ಬೆಳೆಗಳು ಒಣಗುತ್ತಿವೆ, ಕೆರೆ ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ, ದನ ಕರುಗಳಿಗೆ ನೀರಿಲ್ಲದೆ ರೈತ ಸಮುದಾಯ ಸಂಕಷ್ಟದಲ್ಲಿದ್ದರೂ ರಾಜ್ಯ ಸರಕಾರ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಕಿಡಿ ಕಾರಿದರು.ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿದ್ದರೂ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಸರಕಾರಕ್ಕೆ ಒತ್ತಡ ಹಾಕದೇ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಜಿಲ್ಲೆಯ ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ ಕಾರಣ ಇನ್ನಾದರೂ ನಮ್ಮ ಶಾಸಕರುಗಳು ಎಚ್ಚೆತ್ತುಕೊಂಡು ಅವಳಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಸರಕಾರಕ್ಕೆ ಒತ್ತಡ ಹಾಕಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಉಗ್ರ ಹೋರಾಟ ಹಮ್ಮಿಕೋಳ್ಳಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದಾಗಿ ಹೇಳಿದ ರಾಜ್ಯ ಸರಕಾರ ಇದುವರೆಗೂ ಅದರ ಬಗ್ಗೆ ಯಾವುದೇ ಪತ್ರಿಕಾ ಹೇಳಿಕೆ ನೀಡದೇ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು. ಜಿಲ್ಲೆಯ ನೈಜ ಪರಿಸ್ಥಿತಿಯನ್ನು ಬರಗಾಲ ಅಧ್ಯಯನ ತಂಡ ಮಾಡದೇ ರೈತರಿಗೆ ಅನ್ಯಾಯ ಮಾಡಿದೆ, ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಪ್ರಸ್ತುತ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಹಾಗೂ ಇನ್ನೂ ಅನೇಕ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಇಂತಹ ಬರಗಾಲ ಇದ್ದರೂ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಹಾಸ್ಯಾಸ್ಪದ ಹೇಳಿಕೆ ನೀಡಿರುವುದು ರೈತರ ಮೇಲಿನ ಕಾಳಜಿ ತೋರುತ್ತಿದೆ, ಇಂತಹ ಉದ್ದಟತನದ ಮಾತನ್ನು ಬಿಟ್ಟು ಜಿಲ್ಲೆಯ ರೈತರಿಗೆ ಕ್ಷಮಾಪಣೆ ಕೇಳಿ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ಜಿಲ್ಲೆಯ ನೈಜ ಪರಿಸ್ಥಿತಿಯನ್ನು ಅರಿವು ಮೂಡಿಸಿ ತಕ್ಷಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದರು.ಹನಮಂತಪ್ಪ ಬ್ಯಾಡಗಿ ಮಾತನಾಡಿ, ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವುದು ಜಿಲ್ಲೆಯ ರೈತರಿಗೆ ಮಾಡಿದ ಮಹಾದ್ರೋಹ, ಜಿಲ್ಲೆಯ ನೈಜ ವಸ್ತು ಸ್ಥಿತಿಯನ್ನು ಸರಿಯಾಗಿ ಅಧ್ಯಯನ ಮಾಡದೇ ಸರಕಾರಕ್ಕೆ ವರದಿ ಸಲ್ಲಿಸುವಲ್ಲಿ ಎಡವಿದೆ, ಅಕ್ಕ ಪಕ್ಕದ ಜಿಲ್ಲೆಯಲ್ಲಿ ಅಷ್ಟೋ ಇಷ್ಟು ಮಳೆಯಾಗಿ ಬೆಳೆದ ಬೆಳೆಗಳು ಉತ್ತಮವಾಗಿದ್ದರೂ ಅಂತಹ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆದರೆ ಜಿಲ್ಲೆಯ ರೈತರು ಸಮಯಕ್ಕೆ ಸರಿಯಾಗಿ ಮಳೆಯಾದೇ ಸಂಕಷ್ಟದಲ್ಲಿದ್ದಾರೆ ಆದ್ದರಿಂದ ಆದಷ್ಟು ಬೇಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕುರುವತ್ತಿ ಬಣಕಾರ, ಸಭಾನಿ ಕೂಸಗೂರ, ಬಿ,ಎಸ್. ದೊಡ್ಡಬಸಪ್ಪನವರ, ನಾಗರಾಜ ಹಿರೇಅಣಜಿ, ಮಂಜುನಾಥ, ಹರೀಶ ಹಲಗೇರಿ, ಕೆ.ಎಚ್. ಕೆಂಚನಗೌಡ್ರ, ಸಿದ್ದಪ್ಪ ಬಿ., ನಿಂಗರಾಜ ಕೆಂಚನಗೌಡ್ರ, ಪರಮೇಶ ಗುರಾಣಿಗೌಡ್ರ, ಯುವರಾಜ ಪಾಟೀಲ್, ಯಶವಂತ ಹೆಡಿಯಾಲ್, ಹಾಲನಗೌಡ ಪಾಟೀಲ್, ಶಾಮಣ್ಣ ಬಡಗೌಡ್ರ, ಶಮಂತ ಗಾಣಿಗೇರ, ಬೆಟ್ಟಪ್ಪ ಬೆಟ್ಟಣ್ಣನವರ ಹಾಗೂ ಮುಂತಾದವರು ಇದ್ದರು.