ಓಸ್ಯಾಟ್‌ನಿಂದ ನಿರ್ಮಾಣಗೊಳ್ಳಲಿರುವ ಹೊಸ ಶಾಲಾ ಕಟ್ಟಡಕ್ಕೆ ಉದ್ಯಮಿ ವಿಜಯ ಮಾನೆ ಭೂಮಿ ಪೂಜೆ ಸಲ್ಲಿಸಿದರು.
ಹಾನಗಲ್ಲ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆಯಲ್ಲಿ ಈಗ ಸರ್ಕಾರದೊಂದಿಗೆ ಸಾಮಾಜಿಕ ಸಂಸ್ಥೆಗಳೂ ಸಕ್ರೀಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ ಎಂದು ಉದ್ಯಮಿ ವಿಜಯ ಮಾನೆ ತಿಳಿಸಿದರು.
ಶುಕ್ರವಾರ ಇಲ್ಲಿನ ಪಿಎಂಶ್ರೀ ಕೆಪಿಎಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಓಸ್ಯಾಟ್ ನೇತೃತ್ವದಲ್ಲಿ ಬೆಂಗಳೂರಿನ ಅಮೇಡಿಯನ್ ಸಾಫ್ಟವೇರ್ ಪ್ರಾವೆಟ್ ಲಿಮಿಟೆಡ್ ಪ್ರಾಯೋಜಿತ ೧ ಕೋಟಿ ರು. ವೆಚ್ಚದ ೬ ಸುಸಜ್ಜಿತ ಕೊಠಡಿ ನಿರ್ಮಾಣ ಹಾಗೂ ಪೀಠೋಪಕರಣ, ಪಾಠೋಪಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಹತ್ತು ಹಲವು ಹೊಸ ಯೋಜನೆಗಳನ್ನು ರೂಪಿಸಿ ಸಾರ್ವಜನಿಕರಿಗೆ ಸದುಪಯೋಗ ಮಾಡುವ ಕೆಲಸ ನಿರಂತರವಾಗಿ ನಡೆದಿದೆ. ಉಳೆದಲ್ಲ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಸರ್ಕಾರ ಸಮಾಜ ಸೇವಾ ಸಂಸ್ಥೆಗಳು ನೀಡಿದ ಎಲ್ಲ ಸೌಲಭ್ಯಗಳ ಸದುಪಯೋಗ, ನಿರ್ವಹಣೆ ಅತ್ಯಂತ ಮುಖ್ಯವಾದುದು. ಶಾಲೆ ಕಟ್ಟಡ ಪಾಠ ಪೀಠೋಪಕರಣಗಳ ಸದುಪಯೋಗದ ಜೊತೆಗೆ ಉತ್ತಮ ನಿರ್ವಹಣೆ ಇದ್ದರೆ ಮಾತ್ರ ಬಹುಕಾಲ ಬಾಳಬಲ್ಲವು. ಶಾಸಕ ಶ್ರೀನಿವಾಸ್ ಮಾನೆ ಅವರು ಹಾನಗಲ್ಲ ತಾಲೂಕನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕನಸು ಹೊಂದಿದ್ದು ಇದಕ್ಕೆ ಎಲ್ಲರು ಕೈ ಜೋಡಿಸೋಣ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಮಾತನಾಡಿ, ಓಸ್ಯಾಟ್ ಸಹಯೋಗದಲ್ಲಿ ೪ ಶಾಲಾ ಕಟ್ಟಡಗಳು ಪೂರ್ಣಗೊಂಡು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿವೆ. ೨ ಕಟ್ಟಡಗಳ ಕಾಮಗಾರಿ ನಡೆದಿದೆ, ಇನ್ನೂ ೧೦ ಕಟ್ಟಡಗಳ ನಿರ್ಮಾಣಕ್ಕೆ ಬೇರೆ ಬೇರೆ ಕಂಪನಿಗಳ ಸಹಯೋಗ ಪಡೆಯಲಾಗುತ್ತಿದೆ. ಅತ್ಯುತ್ತ,ಮ ಕಟ್ಟಡ ಹಾಗೂ ಪಾಠ ಪೀಠೋಪಕರಗಳ ಮೂಲಕ ಉತ್ತಮ ಕಲಿಕೆಗೆ ಸಹಕಾರಿಯಾಗಿವೆ ಎಂದರು.
ಬೆಂಗಳೂರಿನ ಅಮೇಡಿಯನ್ ಸಾಫ್ಟವೇರ ಪ್ರೈವೇಟ್ ಲಿಮಿಟೆಡ್‌ನ ರಿತು ಮೊಟ್ಟಮ್ ಮಾತನಾಡಿ, ಸಮಾಜ ಸೇವೆ ಎಂಬುದು ಸಮರ್ಪಣಾ ಭಾವದಿಂದ ತೃಪ್ತವಾಗಿ ಕೊಡ ಮಾಡುವ ಸಹಾಯವಾಗಿದೆ. ಇದು ಮುಖ್ಯವಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಸಲ್ಲಬೇಕು. ಸಮಾಜದ ಸಹಕಾರವಿದ್ದರೆ ಇವೆಲ್ಲ ಸಾಧ್ಯ. ನಮ್ಮ ಕಂಪನಿಯಿಂದ ಹಾನಗಲ್ಲ ಪಟ್ಟಣದ ಒಂದು ಸರ್ಕಾರಿ ಶಾಲೆಗೆ ಒಳ್ಳೆಯ ಕಟ್ಟಡ, ಪಾಠ ಪೀಠೋಪಕರಣ ನೀಡುತ್ತಿರುವುದು ನಮಗೆ ಸಂತಸ ತಂದಿದೆ. ಅಲ್ಲದೆ ಇದೇ ಶಾಲೆಗೆ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಅಗತ್ಯ ಕಂಪ್ಯೂಪರ್‌ಗಳನ್ನು ನೀಡುವ ಭರವಸೆಯನ್ನೂ ನೀಡಿದರು.ಅಮೇಡಿಯನ್ ಸಾಫ್ಟವೇರ್ ಪ್ರೈವೆಟ್ ಲಿಮಿಟೆಡ್‌ನ ಕೈಲಾಸ ದರಿಯಾನಾನಿ, ಮಹರ ಫಾತಿಮಾ, ಓಸ್ಯಾಟ್ ಕಂಪನಿಯ ಜಯಂತ್ ರಾವ್, ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ಮುಖ್ಯೋಪಾಧ್ಯಾಯ ಉಮಾ ಬೆಟಗೇರಿ, ಶಿಕ್ಷಣ ಸಂಯೋಜಕ ಬಿ.ಎನ್. ಸಂಗೂರ, ಕ್ಷೇತ್ರ ಸಂಯೋಜನಾಧಿಕಾರಿ ಡಿ.ನಾಗೇಂದ್ರಪ್ಪ ಇದ್ದರು.