ಸೋಮರಡ್ಡಿ ಅಳವಂಡಿ ಕೊಪ್ಪಳ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಗಮನಕ್ಕೂ ತಾರದೇ ಎಐಸಿಸಿ ಇಂತಹ ತೀರ್ಮಾನ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ಸಮೀಕ್ಷೆ ನಡೆಸಿತೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಕುರಿತು ಸ್ಥಳೀಯ ಮಟ್ಟದಲ್ಲಿ ಪಕ್ಷದಲ್ಲಿ ಭಾರೀ ಚರ್ಚೆಯೂ ನಡೆಯುತ್ತಿದೆ. ಎಐಸಿಸಿಗೆ ಈ ಕುರಿತು ವರದಿ ನೀಡಿದ್ದು ಯಾರು, ಸಮೀಕ್ಷೆ ಮಾಡಿದ್ದು ಯಾರು? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
ಬಿಜೆಪಿ ಪಾಳೆಯದಲ್ಲೂ ಇದು ಸಂಚಲನಕ್ಕೆ ಕಾರಣವಾಗಿದ್ದು, ಈಗಾಗಲೇ ಟಿಕೆಟ್‌ಗಾಗಿ ಪ್ರಯತ್ನ ಮಾಡಿದವರಲ್ಲಿ ತಳಮಳ ಶುರುವಾಗಿದೆ. ಪ್ರಿಯಾಂಕಾ ಸ್ಪರ್ಧೆ ನಿಜವಾದರೆ ಕ್ಷೇತ್ರದ ಲೆಕ್ಕಾಚಾರದಲ್ಲೂ ಭಾರೀ ಬದಲಾವಣೆ ಆಗಲಿದೆ. ಬಿಜೆಪಿಯೂ ಪ್ರಿಯಾಂಕಾಗೆ ಠಕ್ಕರ್ ನೀಡುವ ಸರಿಸಮಾನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಚರ್ಚೆಯೂ ಮುಂಚೂಣಿಗೆ ಬಂದಿದೆ.ಪ್ರಿಯಾಂಕ ಗಾಂಧಿ ಸ್ಪರ್ಧೆ ಕುರಿತು ವಿಧಾನಸಭಾ ಚುನಾವಣೆಗೂ ಮುನ್ನವೇ ಎಐಸಿಸಿಯಲ್ಲಿ ಚರ್ಚೆಯಾಗುತ್ತಿತ್ತು. ಈ ಕಾರಣಕ್ಕಾಗಿಯೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಕನಕಗಿರಿಯಲ್ಲಿ ಪ್ರಚಾರ ಕೈಗೊಂಡರು. ಬಳಿಕ ಪಕ್ಷದಿಂದ ಆಂತರಿಕ ಮಾಹಿತಿ ಸಂಗ್ರಹಿಸಲಾಯಿತು. ಚುನಾವಣೆ ಫಲಿತಾಂಶ ಬಂದ ಬಳಿಕ ಈ ಪ್ರಕ್ರಿಯೆ ವೇಗ ಪಡೆದುಕೊಂಡಿತು ಎಂಬ ಮಾತು ಕೇಳಿ ಬರುತ್ತಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಬಿಜೆಪಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದೆ. ಹೀಗಿದ್ದರೂ ಕಾಂಗ್ರೆಸ್ ಹೇಗೆ ಸೂಕ್ತ ಎನ್ನುವ ಪ್ರಶ್ನೆಯೂ ಇದ್ದೇ ಇದೆ. ಆದರೂ ಈ ರೀತಿಯ ಸಾಹಸಕ್ಕೆ ಎಐಸಿಸಿ ಮುಂದಾಗಿರುವುದು ಸದ್ಯದ ಕುತೂಹಲ.
ಬಿಜೆಪಿಯಲ್ಲೂ ಇದು ಸಂಚಲನ ಮೂಡಿಸಿದ್ದು, ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಿದರೆ ಯಾರನ್ನು ಅಖಾಡಕ್ಕೆ ಇಳಿಸಬೇಕು ಎನ್ನುವ ಕುರಿತು ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಬಿಜೆಪಿ ರಾಜ್ಯ ನಾಯಕರು ಅಥವಾ ರಾಷ್ಟ್ರೀಯ ನಾಯಕರಲ್ಲಿಯೇ ಯಾರನ್ನಾದರೂ ಅಖಾಡಕ್ಕೆ ಇಳಿಸಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಕೊಡದಂತೆ ತಯಾರಿ ಮಾಡಬೇಕು ಎಂದು ಬಿಜೆಪಿ ಪಾಳೆಯಲ್ಲಿ ಚರ್ಚೆಯಾಗುತ್ತಿದೆ.
ಪ್ರಿಯಾಂಕ ಗಾಂಧಿ ಬಂದು ಸ್ವರ್ಧೆ ಮಾಡುವುದಾದರೆ ನಾವು ಸ್ವಾಗತಿಸುತ್ತೇವೆ. ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗಾಳಿ ಶುರುವಾಗಿದೆ. ಎಐಸಿಸಿ ನಡೆಸಿದ ಸರ್ವೇಯಲ್ಲೇ ಇದು ಗೊತ್ತಾಗಿರುವುದರಿಂದ ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.