ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕಾರ್ಯ ಮುಂದುವರೆಸಿದ್ದು, ಸಚಿವರೂ ಆಗಿರುವ ತಂದೆ ಸತೀಶ ಜಾರಕಿಹೊಳಿ ಮತ್ತು ಸಹೋದರ ರಾಹುಲ್ ಜಾರಕಿಹೊಳಿ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.ಬಿಸಿಲನ್ನೂ ಲೆಕ್ಕಿಸದೇ ಕ್ಷೇತ್ರದಲ್ಲಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈ ವೇಳೆ ಜನತೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಚಿಕ್ಕೋಡಿ ಕ್ಷೇತ್ರದ ವ್ಯಾಪ್ತಿಗೊಳಪಡುವ 8 ವಿಧಾನಸಭೆ ಕ್ಷೇತ್ರಗಳ ಪೈಕಿ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವುದು ಮತ್ತಷ್ಟು ಕೈ ಗೆಲುವಿಗೆ ಅನುಕೂಲವಾಗಿದೆ. ಪ್ರಿಯಾಂಕಾ ಜಾರಕಿಹೊಳಿ ಹೋದಲೆಲ್ಲ ಸ್ವಯಂ ಪ್ರೇರಿತರಾಗಿಯೇ ಆಸಕ್ತಿಯಿಂದ ಜನತೆ ಅವರನ್ನು ಭೇಟಿಯಾಗಿ ಬೆಂಬಲ ನೀಡುವ ಮೂಲಕ ಮತಯಾಚನೆಗೂ ತೆರಳುತ್ತಿದ್ದಾರೆ. ಹಾಗಾಗಿ, ಎಲ್ಲೆಡೆ ಪ್ರಿಯಾಂಕಾ ಜಾರಕಿಗೊಳಿ ಅವರ ಹವಾ ಕ್ರಿಯೆಟ್ ಆಗಿದೆ. ಪ್ರಿಯಾಂಕಾ ಅಕ್ಕ ಚಿಕ್ಕೋಡಿಯಲ್ಲಿ ಗೆಲುವು ಪಕ್ಕಾ ಎಂಬ ಘೋಷಣೆಗಳು ಮೊಳಗುತ್ತಿವೆ. ಪಕ್ಷಕ್ಕಿಂತ ವೈಯಕ್ತಿಕವಾಗಿಯೂ ಜಾರಕಿಹೊಳಿ ಕುಟುಂಬ ಇಲ್ಲಿ ಪ್ರಾಬಲ್ಯ ಹೊಂದಿರುವುದು, ಸಚಿವ ಸತೀಶ ಜಾರಕಿಹೊಳಿ ಅಭಿವೃದ್ಧಿ ಕೆಲಸಗಳು ಮತ್ತು ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಆಧಾರದ ಮೇಲೆ ಮತಯಾಚನೆ ಯಾಚನೆ ಮಾಡುತ್ತ ಅಬ್ಬರದ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಪ್ರಿಯಾಂಕಾ ಜಾರಕಿಹೊಳಿ ಅವರ ಗೆಲುವಿಗೆ ತಂದೆ ಸತೀಶ ಜಾರಕಿಹೊಳಿ ಮತ್ತು ಸಹೋದರ ರಾಹುಲ್ ಜಾರಕಿಹೊಳಿ ಬೆಂಗಾಲವಾಗಿ ನಿಂತು ಪ್ರಚಾರ ಕಾರ್ಯಕ್ಕೆ ಧುಮುಕಿದ್ದಾರೆ. ಅಲ್ಲದೇ, ಚಿಕ್ಕೋಡಿಯಲ್ಲೇ ಮುಕ್ಕಾಂ ಹೂಡಿದ್ದಾರೆ.ಹಿಂದಿನ ಸಂಸದರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ಗೆ ತಮ್ಮ ಅಮೂಲ್ಯವಾದ ಮತಹಾಕಿ, ನನ್ನನ್ನು ಪ್ರಚಂಡ ಬಹುಮತಗಳ ಅಂತರದೊಂದಿಗೆ ಗೆಲುವು ಸಾಧಿಸಲು ಆರ್ಶೀವಾದ ಮಾಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪ್ರಚಾರದ ವೇಳೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಸರಳ, ಸಜ್ಜನ ರಾಜಕಾರಣಿ. ಜನರ ಕಷ್ಟ ಕಾರ್ಪನ್ಯಗಳಿಗೆ, ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮೂಲಕ ಅವರ ನೆರವಿಗೆ ನಿಂತಿದ್ದಾರೆ. ರಾಜಕಾರಣಕ್ಕಿಂತ ಜಾರಕಿಹೊಳಿ ಕುಟುಂಬ ಸಮಾಜ ಸೇವೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಚುನಾವಣಾ ಪ್ರಚಾರದ ವೇಳೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ.ಬಾಕ್ಸ್..
ಪುತ್ರಿಗಾಗಿ ತಂದೆ ಭರ್ಜರಿ ಕ್ಯಾಂಪೇನ್ಸದ್ಯ ಚಿಕ್ಕೋಡಿ ಲೋಕಸಭಾ ಚುನಾವಣೆ ಪ್ರಚಾರದ ಅಖಾಡ ರಂಗೇರಿದ್ದು, ಪುತ್ರಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲಿಸಲು ತಂದೆ ಸತೀಶ್ ಜಾರಕಿಹೊಳಿ ರಣತಂತ್ರ ಹೆಣೆದಿದ್ದಾರೆ. ಒಂದೆಡೆ ಸಿಎಂ ಪ್ರಚಾರವಾದರೆ ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಪುತ್ರಿ ಪ್ರಿಯಂಕಾ ಜಾರಕಿಹೊಳಿಯನ್ನು ಗೆಲ್ಲಿಸಿಕೊಂಡು ಬರಲು ಸೈಲೆಂಟ್ ಆಗಿಯೇ ರಣತಂತ್ರ ರೂಪಿಸುತ್ತಿದ್ದಾರೆ. ರಾಯಭಾಗ, ಅಥಣಿ, ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿದ್ದಾರೆ.