- ಮಹಿಳಾ ಆತ್ಮನಿರ್ಭರ ಬಗ್ಗೆ ಮಾತನಾಡುವ ಮೋದಿ, ಶಾ ಮೌನಕ್ಕೆ ಆಕ್ರೋಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಭ್ಯರ್ಥಿಯ ಕೈಮೇಲೆ ಎತ್ತಿ ಮತ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಡೀ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆರೋಪಿ ಸಂಸದ ವಿದೇಶಕ್ಕೆ ಓಡಿ ಹೋದರೂ ಅದರ ಬಗ್ಗೆ ಗೊತ್ತೇ ಆಗುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.ನಗರದಲ್ಲಿ ಶನಿವಾರ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಂಸದನ ಜೊತೆಗೆ ವೇದಿಕೆಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಳ್ಳುತ್ತಾರೆ. ಸಂಸದನ ಕುಕೃತ್ಯದ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ವಿದೇಶಕ್ಕೆ ಆತ ಓಡಿ ಹೋದರೂ ಪ್ರಧಾನಿ, ಗೃಹ ಮಂತ್ರಿಗೆ ಗೊತ್ತೇ ಆಗುವುದಿಲ್ಲ ಎಂದರು. ಪ್ರಧಾನಿ, ಗೃಹ ಮಂತ್ರಿಗೆ ದೇಶದ ಪ್ರತಿಯೊಬ್ಬ ನಾಯಕರು, ಮುಖಂಡರ ಚಲನವಲನಗಳ ಇಂಚಿಂಚೂ ಮಾಹಿತಿ ಇರುತ್ತದೆ. ಅಂತಹದ್ದರಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂಸದ ವಿದೇಶಕ್ಕೆ ಹೋದ ಬಗ್ಗೆ ಮಾಹಿತಿ ಇರುವುದಿಲ್ಲವೇ? ಚುನಾವಣೆ ಸಮಯದಲ್ಲಿ ನಯವಾಗಿ ಮಾತನಾಡುವ, ಮಹಿಳೆಯರ ಆತ್ಮನಿರ್ಭರ ವಿಚಾರವಾಗಿ ಹೇಳುವಪ್ರಧಾನಿ, ಗೃಹ ಮಂತ್ರಿಗಳಂತಹವರು ಅದೇ ಮಹಿಳೆಯರ ಗೌರವಕ್ಕೆ ಧಕ್ಕೆ ಬಂದಾಗಲೆಲ್ಲಾ ಅತ್ಯಾಚಾರಿಗಳು, ದೌರ್ಜನ್ಯ ಎಸಗಿದವರ ಪರ ನಿಲ್ಲತ್ತಾರೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವ ಬಾಯಿಯಲ್ಲಿ ಮಾತನಾಡುತ್ತಾರೆ ಎಂದು ಪ್ರಿಯಾಂಕ ಹರಿಹಾಯ್ದರು. - - - * ಕಾಂಗ್ರೆಸ್ ಬಗ್ಗೆ ಮೋದಿ ಕೀಳು ಅಪಪ್ರಚಾರಕ್ಕೆ ಪ್ರಿಯಾಂಕ ಗರಂ
- ನಿಮ್ಮ ಚಿನ್ನ ಕಾಂಗ್ರೆಸ್ ಕಸಿಯುತ್ತೆ, ನಿಮ್ಮ ಒಂದು ಎಮ್ಮೆ ಕಸಿಯುತ್ತೆಂಬ ಹೇಳಿಕೆ ನಿರೀಕ್ಷೆ ಮಾಡಿದ್ರಾ? ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ವಿಶ್ವವಿದ್ಯಾನಿಲಯಗಳು, ಹೆದ್ದಾರಿಗಳು, ಆಸ್ಪತ್ರೆಗಳು ಹೀಗೆ ಎಷ್ಟೆಲ್ಲಾ ಆರಂಭಿಸಿದ್ದೇವೆ. ಅದೇ ರೀತಿ ತಮ್ಮ 10 ವರ್ಷಗಳ ಅವದಿಯಲ್ಲಿ ನರೇಂದ್ರ ಮೋದಿ ದೇಶದಲ್ಲಿ ಎಷ್ಟು ಕೈಗಾರಿಕೆ ಸ್ಥಾಪಿಸಿದರು, ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದರೆಂಬ ಅಭಿವೃದ್ಧಿ ವಿಚಾರಗಳ ಬಗ್ಗೆ ಯಾಕೆ ತಮ್ಮ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಿಲ್ಲ ಎಂದರು.
ಕಾಂಗ್ರೆಸ್ ಜನರ ಹಕ್ಕು, ಅಧಿಕಾರಗಳನ್ನು ಬಲಿಷ್ಠಗೊಳಿಸುತ್ತದೆ. ದೇಶ, ರಾಜ್ಯದ ಜನರ ಬದುಕಿನಲ್ಲಿ ಪರಿವರ್ತನೆ ತರುತ್ತದೆ. ನನ್ನ ಅಜ್ಜಿ ಇಂದಿರಾ ಗಾಂಧಿ ಸಂಕಷ್ಟದಲ್ಲಿದ್ದಾಗ ಕರ್ನಾಟಕದ ನೀವೆಲ್ಲರೂ ಬೆಂಬಲಿಸಿದ್ದಿರಿ. ತಮ್ಮ ಹತ್ಯೆಯಾದಲ್ಲಿ ಒಂದೊಂದು ಹನಿ ರಕ್ತವೂ ದೇಶವನ್ನು ಜೀವಂತಗೊಳಿಸುತ್ತದೆಂದು ನನ್ನ ಅಜ್ಜಿ ತಮ್ಮ ಸಾವಿಗೆ ಒಂದು ದಿನ ಮೊದಲು ಸಭೆಯೊಂದರಲ್ಲಿ ಭಾಷಣ ಮಾಡುವಾಗ ಹೇಳಿದ್ದರು. ನಾನು ಈ ರಾಜ್ಯಕ್ಕೆ ಬಂದಾಗಲೆಲ್ಲ ಇಂದಿರಾ ಗಾಂಧಿ ಅವರ ರಕ್ತದ ಕಣಗಳು ರಾಜ್ಯವನ್ನು ಜೀವಂತವಾಗಿಟ್ಟಿದೆ, ಸಮೃದ್ಧಗೊಳಿಸಿದೆಯೆಂಬ ಭಾವನೆ ಮೂಡುತ್ತದೆ ಎಂದು ತಿಳಿಸಿದರು.
- - -
ದಾವಣಗೆರೆಯಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಬೆಳ್ಳಿ ಸ್ಮರಣಿಗೆ ನೀಡಿ, ಸನ್ಮಾನಿಸಿದರು. ರಣದೀಪ್ ಸಿಂಗ್ ಸುರ್ಜೀವಾಲಾ, ಡಿ.ಕೆ.ಶಿವಕುಮಾರ, ಶಾಮನೂರು ಶಿವಶಂಕರಪ್ಪ ಇತರರು ಇದ್ದರು.
ದಾವಣಗೆರೆಯಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ರಣದೀಪ ಸಿಂಗ್ ಸುರ್ಜೇವಾಲಾ, ಎಸ್.ಎಸ್. ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಪ್ರಚಾರ ಸಮಾವೇಶದಲ್ಲಿ.
-4ಕೆಡಿವಿಜಿ8, 9:ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಜನರತ್ತ ಕೈಮುಗಿಯುತ್ತಿರುವ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ.