ಪ್ರಿಯತೋಷ್, ಮಂಜುನಾಥ್‌ಗೆ ಭೀಮ್ ಸಂಸ್ಥೆ ಪುರಸ್ಕಾರ

KannadaprabhaNewsNetwork | Published : May 20, 2024 1:34 AM

ಸಾರಾಂಶ

ಭೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಸಾವಿರಾರು ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿದ್ದು, ಜತೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ತಿಳಿಸಿದರು.

ಕನ್ನಡಪ್ರಭವಾರ್ತೆ ಕೊರಟಗೆರೆ

ಭೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಸಾವಿರಾರು ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿದ್ದು, ಜತೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ತಿಳಿಸಿದರು.ಪಟ್ಟಣದ ಭೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೆ.ಪಿ.ಪ್ರಿಯತೋಷ್ ಹಾಗೂ ಭೀಮ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಮಂಜುನಾಥ್ ಅವರಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಗುರು ಮತ್ತು ಗುರಿ ಎರಡನ್ನೂ ಪಾಲಿಸುವ ವಿದ್ಯಾರ್ಥಿಗೆ ಹಾಗೂ ವ್ಯಕ್ತಿಗೆ ಸಾಧನೆ ಮಾಡಲು ಸಾಧ್ಯ. ಸನ್ಮಾನಗಳು ಸನ್ಮಾನಿತರಿಗೆ ಮುಂದಿನ ದಿನಗಳಲ್ಲಿ ಸಾಧಿಸುವ ಜವಾಬ್ದಾರಿ ಹೆಚ್ಚುತ್ತದೆ. ನಮ್ಮ ಸಂಸ್ಥೆಯಲ್ಲಿ ಬಡ ಕುಟುಂಬದ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಕೌಶಲ್ಯದಲ್ಲಿಯೇ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಕೆ.ಪಿ.ಪ್ರಿಯತೊಷ್ ಹಾಗೂ ಮಂಜುನಾಥ್ ಸಾಧನೆ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ ಎಂದರು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೋಭಾ ರವಿಕುಮಾರ್ ಮಾತನಾಡಿ, ಸಾಧನೆಗೆ ಬಡತನ ಮತ್ತು ಕಷ್ಟಗಳು ಅಡ್ಡಬರುವುದಿಲ್ಲ. ನಮ್ಮಲ್ಲಿ ಸಾಧಿಸಿರುವ ಬಹುತೇಕ ಮಹನೀಯರು ಬಡತನ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದಂತವರಾಗಿದ್ದು ಅವರ ಸಾಧನೆಗೆ ಗುರಿಯೊಂದೇ ಕಾರಣವಾಗಿದೆ. ಭೀಮ್ ಸಂಸ್ಥೆಯಿಂದ ಸಾವಿರಾರು ಬಡಕುಟುಂಬದ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳುವ ವಿವಿಧ ಕೌಶಲ್ಯಗಳ ತರಬೇತಿಯನ್ನು ಉಚಿತವಾಗಿ ಹಲವು ವರ್ಷಗಳಿಂದ ತಾಲೂಕಿನಲ್ಲಿ ಹಾಗೂ ವಿವಿಧೆಡೆ ಮಾಡಿಕೊಂಡು ಬರುತ್ತಿದ್ದು ಸನ್ಮಾನಿತರಾದ ಪ್ರಿಯತೋಷ್ ಹಾಗೂ ಮಂಜುನಾಥ್ ಅವರ ಪರಿಶ್ರಮ ಹಲವರಿಗೆ ಪ್ರೇರಣೆಯಾಗಲಿ ಎಂದರು.ಮುಖ್ಯ ಶಿಕ್ಷಕ ಡಿ.ಎಂ.ರಾಘವೇಂದ್ರ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿದರು. ಪ್ರೀಯತೋಷ್ ಮತ್ತು ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎನ್.ಪದ್ಮನಾಭ್, ಪೋಷಕರಾದ ಯಶೋಧ, ಶಿಕ್ಷಕಿಯರಾದ ಶ್ರೀದೇವಿ, ನಾಗಮಣಿ, ಫರತ್‌ ಉನಿಸಾ, ಸುಧಾ, ಚೈತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article