ಮೇರುಸದೃಶ ವ್ಯಕ್ತಿತ್ವದ ವಿಶ್ವೇಶತೀರ್ಥರು: ಪಲಿಮಾರುಶ್ರೀ

KannadaprabhaNewsNetwork |  
Published : Jan 01, 2026, 04:00 AM IST
ಪಲಿಮಾರುಶ್ರೀಗಳಿಂದ ಪೇಜಾವರ ವಿಶ್ವೇಶತೀರ್ಥ ನಮನ-2025 ಕಾರ್ಯಕ್ರಮಕ್ಕೆ ಚಾಲನೆ  | Kannada Prabha

ಸಾರಾಂಶ

ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಸೋಮವಾರ ಕದ್ರಿಯ ಮಂಜುಪ್ರಾಸಾದದಲ್ಲಿ ‘ಪೇಜಾವರ ವಿಶ್ವೇಶತೀರ್ಥ ನಮನ -2025’, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಂಗಳೂರು: ಇಂದಿನ ಆಧುನಿಕ ಜಗತ್ತಿನಲ್ಲಿ ಗೂಗಲ್ ಪ್ರಪಂಚದ ಮೂಲಕ ಪ್ರಪಂಚವೇ ನಮ್ಮ ಅಂಗೈನಲ್ಲಿದೆ. ಅದನ್ನೂ ಮೀರಿ ನಿಂತ ಗುರುಗಳು ಪೇಜಾವರ ಶ್ರೀಗಳು. ಅವರ ಜತೆ ಒಂದು ನಿಮಿಷ ನಿಂತರೆ ಇಡೀ ಜಗತ್ತೇ ಅವರಿಗೆ ಮಣಿಯುತ್ತಿತ್ತು. ಅಂತಹ ಅಚಲ, ಮೇರು ಸದೃಶ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು. ಅವರು ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಸೋಮವಾರ ಕದ್ರಿಯ ಮಂಜುಪ್ರಾಸಾದದಲ್ಲಿ ‘ಪೇಜಾವರ ವಿಶ್ವೇಶತೀರ್ಥ ನಮನ -2025’, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಉಸಿರನ್ನೇ ಕೃಷ್ಣನನ್ನಾಗಿಸಿಕೊಂಡಿದ್ದವರು ಪೇಜಾವರ ಶ್ರೀಗಳು, ಎಲ್ಲ ಸಂತರಿಗೂ ಗೌರವ ತಂದು ಕೊಟ್ಟ ಮಹಾಸಂತ. ಅವರ ಪರಂಪರೆಯನ್ನು ನಾವೆಲ್ಲ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಅಯೋಧ್ಯೆಯನ್ನು ಉಳಿಸಿ, ರಕ್ಷಿಸಿ ಬೆಳೆಸಿದವರು ಪೇಜಾವರ ಶ್ರೀಗಳು ಎಂದರು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀ ಯತಿ ಕುಲಚಕ್ರವರ್ತಿ. ಯತಿಗಳು ಯಾವ ರೀತಿ ಬದುಕಿ ಸಾಧನೆ ಮಾಡಬೇಕು ಎಂದು ತಾವೂ ಸಾಧನೆ ಮಾಡಿ ತೋರಿಸಿಕೊಟ್ಟವರು. ಯತಿ ಎಂದರೆ ಕೇವಲ ಸನ್ಯಾಸಿ ಮಾತ್ರ ಅಲ್ಲ, ಜೀವನದಲ್ಲಿ ಸಾಧನೆ ಮಾಡಲು ಪ್ರಯತ್ನಿಸುತ್ತಾರೋ ಅವರೆಲ್ಲ ಯತಿಗಳು. ವಿದ್ವತ್ತಿನಲ್ಲಿ ಅವರ ತಾಕತ್ತು ಎಲ್ಲರಿಗೂ ಪರಿಚಿತ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಿದ್ವಾನ್ ಹೃಷಿಕೇಶ ಬಾಯರಿ, ಬಾರಕೂರು (ವೈದಿಕ ವಿದ್ವಾಂಸರು), ಪೆರ್ಣಂಕಿಲ ಲಕ್ಷ್ಮೀ ನಾರಾಯಣ ಭಟ್ (ಯಜ್ಞಣ್ಣ) (ಪಾಕ ಶಾಸ್ತ್ರಜ್ಞರು), ದಿನೇಶ್ ಭಟ್ ಕದ್ರಿ (ಧಾರ್ಮಿಕ/ ವೈದಿಕ ಸೇವೆ), ಡಾ. ಚಂದ್ರಶೇಖರ ದಾಮ್ಲೆ (ಕನ್ನಡ ಸೇವೆ), ಎಡಕ್ಕಾನ ಮಹಾಬಲೇಶ್ವರ ಭಟ್ (ಉದ್ಯಮ/ ಸಮಾಜ ಸೇವೆ), ಮುನಿಯಾಲು ದಾಮೋದರ ಆಚಾರ್ಯ (ಸಾಂಪ್ರದಾಯಿಕ ಸ್ವರ್ಣಶಿಲ್ಪ), ಪಿ.ಡಿ. ಶೆಟ್ಟಿ ಮುಂಬೈ (ಕನ್ನಡ ಸೇವೆ), ಎರ್ಮಾಳು ಹಿದಾಯತ್ತುಲ್ಲಾ ಸಾಹೇಬ್ (ಶಾಸ್ತ್ರೀಯ ವಾದ್ಯ ಸಂಗೀತ), ಎಂ. ಮಾಧವ ಆಚಾರ್ಯ ಇಜ್ಜಾವು (ಜ್ಯೋತಿಷ ವಿದ್ವಾಂಸರು), ಪ್ರೊ| ಎ. ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿ (ಶಿಕ್ಷಣ/ಧಾರ್ಮಿಕ ಸೇವೆ), ಕಾಂಚನ ಈಶ್ವರ ಭಟ್ ಪುತ್ತೂರು (ಶಾಸ್ತ್ರೀಯ ಸಂಗೀತ), ವಿಶು ಶೆಟ್ಟಿ ಅಂಬಲಪಾಡಿ (ಸಮಾಜ ಸೇವೆ), ಶಿರವಂತೆ ಸುರೇಂದ್ರ ರಾವ್ (ಧಾರ್ಮಿಕ ಸಂಘಟನೆ), ಕವಿತಾ ಶಾಸ್ತ್ರಿ (ಸಮಾಜ ಸೇವೆ/ ಶಿಕ್ಷಣ), ಬಿ. ವಿಜಯಲಕ್ಷ್ಮೀ ಶೆಟ್ಟಿ (ಮಹಿಳಾ ಸಂಘಟನೆ/ಕನ್ನಡ ಸೇವೆ), ಉಮೇಶ್ ನಾಥ್ ಜೋಗಿ ಕದ್ರಿ (ಧಾರ್ಮಿಕ ಸೇವೆ), ದಿನೇಶ್ ಭಟ್ (ಅರ್ಚಕರು), ಜನಾರ್ದನ ಹಂದೆ (ಯಕ್ಷಗಾನ ಸಂಘಟಕ) ಇವರಿಗೆ ‘ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’, ಕಾಸರಗೋಡಿನ ರಾಜನ್ ಮುನಿಯಾರ್ ಅವರಿಗೆ ‘ಸಾಧನಾ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಬಂಧ, ಅಂಚೆ ಕಾರ್ಡ್‌ ಮತ್ತು ಡ್ರಾಯಿಂಗ್ ಶೀಟ್‌ನಲ್ಲಿ ಪೇಜಾವರ ಶ್ರೀಗಳ ಚಿತ್ರರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇ.ಮೂ. ಕುಡುಪು ನರಸಿಂಹ ತಂತ್ರಿಯವರು ಶ್ರೀ ವಿಶ್ವೇಶತೀರ್ಥರ ಸಂಸ್ಮರಣೆ ಮಾಡಿದರು. ಕದ್ರಿ ಪ್ರಭಾಕರ ಅಡಿಗ, ಕದ್ರಿ ನವನೀತ ಶೆಟ್ಟಿ, ಜಿ.ಕೆ. ಭಟ್ ಸೆರಾಜೆ ಮತ್ತಿತರರಿದ್ದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರಸ್ತಾವಿಸಿ, ನಿರೂಪಿಸಿದರು. ವಿವಿಧ ತಂಡಗಳಿಂದ ಕೃಷ್ಣ ಗೀತ ಗಾಯನ, ‘ವಂದೇ ಮಾತರಂ’ ದೇಶ ಭಕ್ತಿ ಗೀತೆಯ 150ನೇ ವರ್ಷಾಚರಣೆ ಪ್ರಯುಕ್ತ ಭಾರತ ಮಾತಾ ಪೂಜನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ