ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಎದುರು ಸಂಘಟನೆಗಳ ಮುಖಂಡರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನೆ ನಡೆಸಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ಮುಖಂಡರಾದ ಎಂ.ಎನ್.ಜಯರಾಜು ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ಭಿಕ್ಷೆಯಿಂದಲೇ ಗೃಹ ಮಂತ್ರಿಯಾಗಿರುವ ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿರುವುದು ಅವರ ಮೂರ್ಖತನದ ಪರಮಾ ವಧಿಯಾಗಿದೆ ಎಂದು ಖಂಡಿಸಿದರು.ಒಬ್ಬ ಗೃಹಮಂತ್ರಿಯಾಗಿ ಸಂವಿಧಾನದ ಘನತೆ ಗೌರವ ಎತ್ತಿಹಿಡಿಯಬೇಕಾದ ಅಮಿತ್ ಶಾ ಒಬ್ಬ ಮನು ವಾದದ ಪರಮಾಗಿ ಮಾತನಾಡಿದ್ದಾರೆ. ಸಚಿವರ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಪ್ರಧಾನಿ ಮೋದಿ ಸಹ ತಮ್ಮ ಅವಿವೇಕ ತನವನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪುರಸಭಾ ಸದಸ್ಯ ಕಿರಣ್ ಶಂಕರ್ ಮಾತನಾಡಿ, ಅಂಬೇಡ್ಕರ್ ಬಗ್ಗೆ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡದಿದ್ದಲ್ಲಿ ಸೋಮವಾರ ಪಟ್ಟಣದಲ್ಲಿ ಎಲ್ಲಾ ಶೋಷಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳ ಒಡಗೂಡಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ಹೇಳಿಕೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ದೇಶದ ರಾಷ್ಟ್ರಧ್ವಜವನ್ನು ಸಹ ಒಪ್ಪದೇ ಭಗವದ್ವಜ ಈ ದೇಶದ ರಾಷ್ಟ್ರ ಧ್ವಜ ಆಗಬೇಕೆಂದು ಆಗ್ರಹಿಸಿದ್ದರು. ಇಂತಹ ಮನಸ್ಥಿತಿಯ ಪುರೋಹಿತ ಶಾಹಿಯ ಪರವಾಗಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ನೀತಿಗಳನ್ನು ಜಾರಿಗೊಳಿಸಲು ಹೊರಟಿರುವ ಒಕ್ಕೂಟ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಅಂಬೇಡ್ಕರ್ ಕುರಿತು ಹಗುರ ಹೇಳಿಕೆಗೆ ಖಂಡನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಹಗುರವಾಗಿ ಹೇಳಿಕೆ ನೀಡಿರುವುದನ್ನು ದಲಿತ ಹೋರಾಟ ಸಮಿತಿಯ ಅಧ್ಯಕ್ಷ ಬೊಮ್ಮರಾಜು ಖಂಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಹೋರಾಟ ಸಮಿತಿಯ ಪದಾಧಿಕಾರಿಗಳ, ಕಾರ್‍ಯಕರ್ತರ ಸಭೆ ನಡೆಸಿ ಬಳಿಕ ಮಾತನಾಡಿ, ಗೃಹಸಚಿವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡಸಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದರೆ ನೂರು ಜನ್ಮದ ಪುಣ್ಯ ಬರುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ವಿಶ್ವನಾಯಕರು ಅವರ ಹೆಸರು ಸೂರ್ಯ, ಚಂದ್ರ ಇರುವವರೆಗೂ ಅಜರಾಮರವಾಗಿ ಇರುತ್ತದೆ. ಅಂಬೇಡ್ಕರ್ ಹೆಸರು ಬದಲಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಸಣಬದಲ್ಲಿ ದಲಿತ ಯವಕನ ಮೇಲೆ ನಡೆದಿರುವ ದೌರ್ಜನ್ಯ ಕುರಿತು ಸಂಬಂಧಿಸಿದ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಮುಂದೆ ತಾಲೂಕಿನ ದಲಿತರ ಮೇಲೆ ಯಾವುದೆ ದೌರ್ಜನ್ಯ, ದಬ್ಬಾಳಿಕೆ ನಡೆಯದಂತೆ ಕ್ರಮವಹಿಸಬೇಂದು ಒತ್ತಾಯಿಸಿದರು.ಈ ವೇಳೆ ಜವರಯ್ಯ, ತಾಪಂ ಮಾಜಿ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಪುರಸಭೆ ಸದಸ್ಯ ಶಿವಕುಮಾರ್, ಮಾಜಿ ಸದಸ್ಯ ರಾಚಯ್ಯ, ಮಲ್ಲಿಗೆರೆ ಜಗದೀಶ್, ಅಂತನಹಳ್ಳಿ ಶಿವಸ್ವಾಮಿ, ಕೆಂಪರಾಜು, ಜಯಲಕ್ಷ್ಮಿ, ನಾಗೇಶ್, ದೇವರಾಜು, ವರದರಾಜು, ಅಶೋಕ, ದ್ಯಾವಯ್ಯ, ಕುಮಾರ ಸೇರಿದಂತೆ ಹಲವರು ಹಾಜರಿದ್ದರು.