ರಾಣಿಬೆನ್ನೂರು: ಲವ್ ಜಿಹಾದ್‌ಗೆ ಬಲಿಯಾದ ಸ್ವಾತಿ ಬ್ಯಾಡಗಿ ಎಂಬ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಹಾಗೂ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶುಶ್ರೂಷಕಿಯರು ಸೋಮವಾರ ನಗರದ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿ ನಯಾಜ್‌ನ ಪ್ರತಿಕೃತಿಯನ್ನು ದಹಿಸಿ, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಸ್ವಾತಿ ಹತ್ಯೆ ನಿಜಕ್ಕೂ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನ ಕೃತ್ಯವಾಗಿದೆ. ಲವ್ ಜಿಹಾದ್‌ನಂತಹ ಅನೇಕ ಕೃತ್ಯಗಳು ನಡೆಯುತ್ತಿದ್ದರೂ ಕೊಲೆ ಮಾಡಿದವರು, ಹತ್ಯೆಗೈದವರನ್ನು ಸರ್ಕಾರ ರಕ್ಷಿಸುವಂತಹ ಕೆಲಸ ಮಾಡುತ್ತಿದೆ. ನಯಾಜ್ ಲವ್ ಜಿಹಾದ್ ಮೂಲಕ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿಯನ್ನು ಪ್ರೀತಿಯ ನಾಟಕವಾಡಿ, ಮೋಸ ಮಾಡಿ ದುರ್ಗಾಚಾರಿ ಮತ್ತು ವಿನಾಯಕನ ಜತೆ ಸೇರಿ ಕೊಲೆ ಮಾಡಿ ಅವಳನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ. ಸ್ವಾತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಳು.
ಹಾವೇರಿ: ಮಾಸೂರಿನ ಯುವತಿ ಸ್ವಾತಿ ಬ್ಯಾಡಗಿ ಕೊಲೆ ಹಿಂದೆ ಲವ್ ಜಿಹಾದ್ ಎಂಬ ಆರೋಪ ಸುಳ್ಳು. ಇದಕ್ಕೆ ಸಾಕ್ಷಿ ಇಲ್ಲ. ಆರೋಪ ಮಾಡುವವರು ಸಾಕ್ಷಿ ಕೊಡುತ್ತಿಲ್ಲ. ಆದರೆ, ಈ ಕೃತ್ಯ ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಿರೇಕೆರೂರು ಕ್ಷೇತ್ರದ ಶಾಸಕ ಯು.ಬಿ. ಬಣಕಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ. ಅಪರಿಚಿತ ಶವ ಸಿಕ್ಕ ನಂತರ ಕಾನೂನು ಪ್ರಕಾರ ಅಂತ್ಯಕ್ರಿಯೆ ಮಾಡಿದ್ದಾರೆ. ಆಕೆಯ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸುವುದು ತಡವಾಗಿದೆ. ಹಾಗಾಗಿ ಆಕೆಯ ಕುಟುಂಬದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾಪತ್ತೆ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಯುವತಿಯ ಪತ್ತೆ ಮಾಡಲು ಮುಂದಾದರು. ಅದು ಅಸಹಜ ಸಾವಲ್ಲ ಕೊಲೆ ಎಂಬುದು ಗೊತ್ತಾಯಿತು. ಕೂಡಲೇ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.ಎಲ್ಲರೂ ಹೋರಿ ಹಬ್ಬದಲ್ಲಿ ಸ್ನೇಹಿತರಾದವರು. ಇದರಲ್ಲಿ ಹಿಂದು- ಮುಸ್ಲಿಂ ಎಂಬ ಭಾವನೆ ಇಲ್ಲ. ಒಬ್ಬ ಮುಸ್ಲಿಂ, ಇಬ್ಬರು ಹಿಂದುಗಳು ಇದ್ದಾರೆ. ಶವ ಪರೀಕ್ಷೆಯಲ್ಲಿ ಕೊಲೆ ಎಂದು ಗೊತ್ತಾದ ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಇದಕ್ಕೆ ಅಗತ್ಯವಾದ ಸಹಕಾರ ನೀಡುತ್ತೇವೆ ಎಂದರು.ಸರ್ಕಾರದಿಂದ ಪರಿಹಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಸದ್ಯಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಬೇಕು. ದಿನಕ್ಕೊಂದು ಕಥೆ ಕಟ್ಟುವುದು ಬಿಡಬೇಕು. ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದಷ್ಟೇ ಹೇಳಿದರು.