ಹೊಸಪೇಟೆ: ರಾಜ್ಯದಲ್ಲಿ ಕಳೆದ 2022ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ರಕ್ಷಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವುಗಳ ರಕ್ಷಣೆ ದೃಷ್ಟಿಯಿಂದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ಅತ್ಯಂತ ಪರಿಣಾಮಕಾರಿ ಆಗಿತ್ತು. ಈ ಕಾಯ್ದೆಯಲ್ಲಿ ಗೋ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು. ಈ ಕಾಯ್ದೆಯಲ್ಲಿ ಗೋವುಗಳನ್ನು ಸಾಗಾಟ ಮಾಡುವಾಗ ಸೀಜ್ ಆದ ವಾಹನಗಳನ್ನು, ವಾಹನದ ಮೌಲ್ಯದಷ್ಟು ಬ್ಯಾಂಕ್ ಗ್ಯಾರಂಟಿ ನೀಡಿ ಬಿಡಿಸಿಕೊಂಡು ಹೋಗಬೇಕಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬ್ಯಾಂಕ್ ಗ್ಯಾರಂಟಿಯನ್ನು ಕೈಬಿಟ್ಟು ಕಾಯ್ದೆ ಸರಳೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಗೋವುಗಳ ಸಾಗಾಟ ಅಧಿಕವಾಗಲಿದ್ದು ಹತ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಗೋ ರಕ್ಷಣೆ ಕಾಯ್ದೆಗೆ ಯಾವುದೇ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿದರು.ವರ್ತಕರ ಸಂಘದ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ, ನಮ್ಮ ಹೋರಾಟ ಮಾಂಸಹಾರಿಗಳ ವಿರುದ್ದವಲ್ಲ. ನಾವು ದೇವರೆಂದು ಪೂಜಿಸುವ ಗೋವುಗಳ ಹತ್ಯೆಯ ವಿರುದ್ದ. ಈ ಹಿನ್ನೆಲೆಯಲ್ಲಿ ನಾವು ಗೋವುಗಳ ಹತ್ಯೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕಾಯ್ದೆಗೆ ತಿದ್ದುಪಡಿ ಮಾಡಿದರೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು. ನಂತರ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಗೋರಕ್ಷಾ ಪ್ರಮುಖ್ ಸತೀಶ್ ಕುಮಾರ್ ಹೊಸೂರು, ಬಜರಂಗದಳದ ಜಿಲ್ಲಾ ಸಂಯೋಜಕರಾದ ತಿಪ್ಪೇಸ್ವಾಮಿ ಸಿಂದಿಗೇರಿ, ನಾಗಾರ್ಜುನ ಸರ್ದೇಸಾಯಿ, ವಿಶ್ವ ಹಿಂದೂ ಪರಿಷತ್ ನ ಮಾತೃ ಶಕ್ತಿ ಪ್ರಾಂತ ಸಂಯೋಜಕಿ ಮೀರಾ ರಘು ಪ್ರಸಾದ್, ಭುವನೇಶ್ವರಿ, ಜಿಲ್ಲಾ ಸಂಚಾಲಕ ಕುಶಾಲ್, ಜಗದೀಶ್ ಕಾಮಟಗಿ, ಮುಖಂಡ ಸೂರಿ ಬಂಗಾರು, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸುನೀಲ್, ಕಿರಣ್, ಸಣ್ಣ ಸ್ವಾಮಿ, ರೇವಣ್ಣ, ಕಲ್ಲಪ್ಪ, ವ್ಯಾಸರಾಜ್, ಗಂಗಾಧರ, ಜಂಬಯ್ಯ ಮತ್ತಿತರರಿದ್ದರು.