ಕೇಸರಿ ಅಲಂಕಾರ ತೆರವು ಖಂಡಿಸಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Nov 01, 2024, 12:34 AM ISTUpdated : Nov 01, 2024, 12:35 AM IST
ಬೈಲಹೊಂಗಲದಲ್ಲಿ ಕೇಸರಿ ಪರಪರಿ ತೆರುವುಗೊಳಿಸಿದ್ದನ್ನು ಖಂಡಿಸಿ ವಿಶ್ವ ಹಿಂದು ಪರಿಷದ್, ಬಜರಂಗದಳ ಕಾರ್ಯಕರ್ತರು ರಸ್ತೆ ತಡೆದು ಗುರುವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬೈಲಹೊಂಗಲ ಪಟ್ಟಣದಲ್ಲಿ ಅಳವಡಿಸಿದ್ದ ಕೇಸರಿ ಪರಪರಿ ತೆರುವುಗೊಳಿಸಿರುವ ಪೊಲೀಸರ ಕಾರ್ಯವೈಖರಿ ಖಂಡಿಸಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲೂಕು ಘಟಕ ಕಾರ್ಯಕರ್ತರು ದಿಢೀರ್‌ ರಸ್ತೆ ತಡೆದು ಗಂಟೆಗಳಕಾಲ ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದಲ್ಲಿ ಅಳವಡಿಸಿದ್ದ ಕೇಸರಿ ಪರಪರಿ ತೆರುವುಗೊಳಿಸಿರುವ ಪೊಲೀಸರ ಕಾರ್ಯವೈಖರಿ ಖಂಡಿಸಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲೂಕು ಘಟಕ ಕಾರ್ಯಕರ್ತರು ದಿಢೀರ್‌ ರಸ್ತೆ ತಡೆದು ಗಂಟೆಗಳಕಾಲ ಗುರುವಾರ ಪ್ರತಿಭಟನೆ ನಡೆಸಿದರು.

ಪೊಲೀಸರು ಕೇಸರಿ ಪರಪರಿ ತೆರುವುಗೊಳಿಸಿರುವ ವಿಷಯ ತಿಳಿಯುತ್ತಿದ್ದಂತೆ ರಾಯಣ್ಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ನಾಗರಿಕರು ಪೊಲೀಸರ ಕಾರ್ಯ ವೈಖರಿ ಖಂಡಿಸಿದರು.

ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಪಟ್ಟಣದೆಲ್ಲೆಡೆ ಕೇಸರಿ ಪರಪರಿ ಕಟ್ಟಿ ಪಟ್ಟಣದ ಸೌಂದರ್ಯ ಹೆಚ್ಚಿಸಲಾಗಿದೆ. ಅದನ್ನು ಏಕಾಏಕಿ ಬಂದು ಪುರಸಭೆ ಸಿಬ್ಬಂದಿ ತೆರುವುಗೊಳಿಸಿರುವುದು ಸರಿಯಲ್ಲ. ತೆರುವುಗೊಳಿಸಿರುವ ಕೇಸರಿ ಪರಪರಿ ಮರಳಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಪಿಐ ಪಂಚಾಕ್ಷರಿ ಸಾಲಿಮಠ ಪ್ರತಿಭಟನಾ ನಿರತರ ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಕೇಸರಿ ಪರಪರಿ ಇದ್ದ ಜಾಗದಲ್ಲೇ ಮರಳಿ ಕಟ್ಟಿದರೆ ಮಾತ್ರ ಪ್ರತಿಭಟನೆ ಕೈ ಬಿಡುವುದಾಗಿ ಪಟ್ಟುಹಿಡಿದರು. ಈ ವೇಳೆ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಪುರಸಭೆ ಕಚೇರಿ ವ್ಯವಸ್ಥಾಪಕ ಎಂ.ಐ. ಕುಟ್ರಿ ಪ್ರತಿಭಟನಾ ಸ್ಥಳಕ್ಕೆ ಬಂದು ಕೇಸರಿ ಪರಪರಿ ಮರಳಿ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ವಕೀಲರಾದ ಪ್ರಶಾಂತ ಅಮ್ಮಿನಭಾವಿ, ಗಿರೀಶ ಹರಕುಣಿ ಮಾತನಾಡಿ, ಸರ್ಕಾರ ಹಿಂದೂಗಳ ಆಚರಣೆಗೆ, ಭಾವನೆಗಳಿಗೆ ಅಡ್ಡಿಪಡಿಸುವುದಕ್ಕಾಗಿ ಈ ರೀತಿಯ ಕೆಲಸಗಳನ್ನು ಅಧಿಕಾರಿಗಳ ಮೂಲಕ ಮಾಡಿಸುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಎಲ್ಲರೂ ತಲೆ ತಗ್ಗಿಸಬೇಕಾಗುತ್ತದೆ. ಜನಸಾಮಾನ್ಯರು, ಹಿಂದೂಗಳು ಜಾಗೃತರಾಗಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಪೊಲೀಸರು ಹಿಂದೂಗಳ ಹಬ್ಬಗಳಿಗೆ, ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಎಂದು ಹೇಳಿದರು.

ಮುಖಂಡರಾದ ಗೌತಮ ಇಂಚಲ, ರಾಜು ಬಡಿಗೇರ, ಸಂಗಮೇಶ ಸವದತ್ತಿಮಠ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಮಲ್ಲಿಕಾರ್ಜುನ ಏಣಗಿಮಠ, ಬಸವರಾಜ ಯಾಸನ್ನವರ, ಬಿಜೆಪಿ ಮುಖಂಡರಾದ ಗುರು ಮೆಟಗುಡ್ಡ, ಸುಭಾಸ ತುರಮರಿ, ಶಿವಾನಂದ ಬಡ್ಡಿಮನಿ, ವಿಜಯ ಪತ್ತಾರ, ಸಚೀನ ಕಡಿ, ರಾಜು ಹರಕುಣಿ, ದಯಾನಂದ ಗೆಜ್ಜಿ, ಜಗದೀಶ ಲೋಕಾಪೂರ, ಬಸವರಾಜ ಶಿಂತ್ರಿ, ವಿನಯ ಹರಕುಣಿ, ಪುಂಡಲೀಕ ಭಜಂತ್ರಿ, ಶಂಕರ ಪಟ್ಟೇದ ಅನೇಕರು ಇದ್ದರು. ದೀಪಾವಳಿ, ರಾಜ್ಯೋತ್ಸವ ಸಲುವಾಗಿ ಕೇಸರಿ ಪರಪರಿ ಕಟ್ಟಿ ಅಲಂಕಾರ ಮಾಡಲಾಗಿದೆ. ಇದರಿಂದ ಯಾರ ಭಾವನೆಗಳಿಗೂ ಧಕ್ಕೆ ಆಗುವುದಿಲ್ಲ. ಪೊಲೀಸರು ಏಕಾಏಕಿ ರಾತ್ರೋರಾತ್ರಿ ತೆರುವುಗೊಳಿಸಿರುವುದು ಸರಿಯಲ್ಲ. ಇದರಿಂದ ಹಿಂದುಗಳ ಭಾವನೆಗೆ, ಜನಸಾಮಾನ್ಯರಿಗೆ ನೋವಾಗಿದೆ.

-ಪ್ರಮೋದಕುಮಾರ ವಕ್ಕುಂದಮಠ ಜಿಲ್ಲಾಧ್ಯಕ್ಷ ವಿಶ್ವಹಿಂದೂ ಪರಿಷದ್

PREV