ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ನಿವಾಸದಲ್ಲಿ ಸಂಸದೆ ಸುಮಲತಾ ಕರೆದಿದ್ದ ಆಪ್ತರು, ಬೆಂಬಲಿಗರು, ಹಿತೈಷಿಗಳ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜೆಡಿಎಸ್ ಬೆಂಬಲಿಸುವ ವಿಚಾರವಾಗಿ ಬೆಂಬಲಿಗರಿಂದ ವಿರೋಧಾಭಿಪ್ರಾಯಗಳು ಹೆಚ್ಚು ವ್ಯಕ್ತವಾದವು.
ಕಳೆದ ಚುನಾವಣೆಯನ್ನು ಸ್ವಾಭಿಮಾನದ ಹೆಸರಿನಲ್ಲಿ ಮಾಡಿದೆವು. ಅದಕ್ಕೆ ಜಿಲ್ಲೆಯ ಜನರು ನಿರೀಕ್ಷೆಗೂ ಮೀರಿ ನಮಗೆ ಸ್ಪಂದಿಸಿದರು. ಅಂದು ಜೆಡಿಎಸ್‌ನವರು ನಿಮಗೆ ಮಾಡಿದ ಅವಮಾನಕ್ಕೆ ಪ್ರತ್ಯುತ್ತರವೆಂಬಂತೆ ಜನರು ನಿಮ್ಮ ಪರವಾಗಿ ಫಲಿತಾಂಶ ನೀಡಿದರು. ಈಗ ನಿಮ್ಮನ್ನು ಅವಮಾನಿಸಿದವರನ್ನೇ ಚುನಾವಣೆಯಲ್ಲಿ ಬೆಂಬಲಿಸುವುದಾದರೂ ಹೇಗೆ? ಅದನ್ನು ಜನರು ಹೇಗೆ ಒಪ್ಪುತ್ತಾರೆ? ಅವರನ್ನು ವಿರೋಧ ಮಾಡಿಕೊಂಡು ಬಂದ ನಾವು ಅವರ ಪರವಾಗಿ ಪ್ರಚಾರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.ಈ ಚುನಾವಣೆಯಲ್ಲಿ ನೀವು ತಟಸ್ಥರಾಗಿ ಉಳಿಯಿರಿ. ಯಾರನ್ನೂ ಬೆಂಬಲಿಸುವುದು ಬೇಡ. ಪಕ್ಷೇತರರಾಗಿ ಸ್ಪರ್ಧಿಸಿದರೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಈಗ ನಾವು ಜೆಡಿಎಸ್ ಬೆಂಬಲಿಸುವ ನಿರ್ಧಾರ ಕೈಗೊಂಡರೆ ಜನರೆದುರು ನಮಗಿರುವ ಗೌರವ ಮಣ್ಣುಪಾಲಾಗುತ್ತದೆ. ನೀವೇನಾದರೂ ಜೆಡಿಎಸ್ ಬೆಂಬಲಿಸುವ ತೀರ್ಮಾನಕ್ಕೆ ಬದ್ಧರಾದರೆ ನಾವು ಕಾಂಗ್ರೆಸ್ ಪರ ನಿಲ್ಲಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಸಂಸದರಾಗಿದ್ದ ಐದು ವರ್ಷವೂ ನಿಮ್ಮನ್ನು ವಿರೋಧಿಸಿಕೊಂಡು ಬಂದಿದ್ದಾರೆ. ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ಅವರು ಕೈಜೋಡಿಸಲೇ ಇಲ್ಲ. ಅಂತಹವರೊಂದಿಗೆ ಈಗ ಎಂತಹ ಸ್ನೇಹ. ಅವರು ಚುನಾವಣಾ ಕಾರಣಕ್ಕಾಗಿ ನಿಮ್ಮನ್ನು ಅಕ್ಕ ಎನ್ನುತ್ತಿದ್ದಾರೆ. ನಿಮ್ಮ ಮೇಲಿನ ಹಗೆತನ ದೂರವಾಗಿಲ್ಲ. ಜೆಡಿಎಸ್ ಬೆಂಬಲಿಸುವುದರಿಂದ ಸ್ವಾಭಿಮಾನದ ಹೆಸರೇಳಿಕೊಂಡು ಜನರ ಮುಂದೆ ಹೋಗಲಾಗದು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಎಲ್ಲ ಬೆಂಬಲಿಗರ ಸಲಹೆ-ಅಭಿಪ್ರಾಯಗಳನ್ನು ಆಲಿಸಿದ ಸುಮಲತಾ ಅವರು, ಏ.3ರಂದು ಮಂಡ್ಯದಲ್ಲೇ ಸಭೆ ಆಯೋಜಿಸಿ ನನ್ನ ತೀರ್ಮಾನವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಭವಿಷ್ಯದ ರಾಜಕೀಯದ ದೃಷ್ಟಿಯಿಂದ ನಿರ್ಧಾರ ಪ್ರಕಟಿಸಿ’:
ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಜೆಡಿಎಸ್‌ನವರಿಗೂ ತಾವು ಮಾಡಿದ ತಪ್ಪಿನ ಅರಿವಾಗಿದೆ. ಅವರೆಲ್ಲರೂ ಈಗ ನಿಮ್ಮ ಬೆಂಬಲ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದಾರೆ. ವೃಥಾ ದ್ವೇಷ ರಾಜಕಾರಣವನ್ನು ಮುಂದುವರೆಸುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಹಳೆಯದನ್ನು ಮರೆತು ಪ್ರಸ್ತುತ ರಾಜಕಾರಣಕ್ಕೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಬೇಕಿದೆ. ಒಮ್ಮೆ ಮೈತ್ರಿ ಅಭ್ಯರ್ಥಿ ಗೆದ್ದರೆ ನಿಮಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಗೌರವ ಹೆಚ್ಚಾಗಲಿದೆ. ನಿಮಗೂ ರಾಜಕೀಯವಾಗಿ ಒಳ್ಳೆಯ ಭವಿಷ್ಯ ಸೃಷ್ಟಿಸಿಕೊಡಬಹುದು. ಜೊತೆಗೆ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯಕ್ಕೂ ಅನುಕೂಲವಾಗಲಿದೆ. ಇದರೊಂದಿಗೆ ಜೆಡಿಎಸ್‌ನವರ ನಡುವಿನ ವಿರಸಕ್ಕೆ ಅಂತ್ಯವಾಡಬಹುದು ಎಂದು ತಿಳಿಸಿದ್ದಾರೆ.