-ಕಡೂರಿನ ಟಿಡಿಎಸ್ ಸಭಾಂಗಣದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ
--- ಕಾಂಗ್ರೆಸ್ ಕಡೆಗೆ ಜನರ ಒಲವು
-ಅಭ್ಯರ್ಥಿಗೆ ಹೆಚ್ಚು ಮತ ಸಿಗುವಂತೆ ಶ್ರಮಿಸಬೇಕು-ಜನರಿಗೆ ಸ್ಪಂದಿಸುವ ಸಂಸದನನ್ನು ಆಯ್ಕೆ ಮಾಡಿ
ಕನ್ನಡಪ್ರಭ ವಾರ್ತೆ, ಕಡೂರುವಿರೋಧಿಗಳ ಟೀಕೆಗೆ ಬಗ್ಗದೆ ಜನಪರವಾದ ಆಡಳಿತವನ್ನು ನಮ್ಮ ನಾಯಕರಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನೀಡುತ್ತಿರುವ ಯೋಜನೆಗಳ ವಿವರಗಳನ್ನು ಕಾರ್ಯಕರ್ತರು ಜನತೆಗೆ ಸಮರ್ಥವಾಗಿ ವಿವರಿಸಿ ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಗೆಲುವಿಗೆ ಕೈಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕರೆ ನೀಡಿದರು. ಕಡೂರಿನ ಟಿಡಿಎಸ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು. ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ರವರ ನಾಮಪತ್ರ ಸಲ್ಲಿಕೆ ದಿನದಂದು ಕಡೂರು ಕ್ಷೇತ್ರದಿಂದ ಅತೀ ಹೆಚ್ಚು ಜನ ಭಾಗವಹಿಸಿದ್ದು ಕಾಂಗ್ರೆಸ್ ಪಕ್ಷದ ಕಡೆಗೆ ಜನರ ಒಲವು ಇರುವುದಕ್ಕೆ ಸಾಕ್ಷಿ ಯಾಗಿದೆ. ಬೇರೆ ಪಕ್ಷದವರಿಗೆ ದುಡಿಯಬೇಕಾದ ಅನಿವಾರ್ಯತೆ ನಮಗಿಲ್ಲ. ಶ್ರಮ ಹಾಕುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ಸಿಗುವಂತೆ ಶ್ರಮಿಸಬೇಕು. ಅಭ್ಯರ್ಥಿ ಶ್ರೇಯಸ್ ಪಟೇಲ್ ಕ್ಷೇತ್ರದ ಪ್ರತೀ ಹಳ್ಳಿಗೆ ಬರಲು ಅಸಾಧ್ಯವಾದ ಕಾರಣ ಎಲ್ಲೆಡೆ ನಾವೇ ಅಭ್ಯರ್ಥಿ ಎಂಬ ಮನೋಭಾವನೆ ಇಟ್ಟುಕೊಂಡು ಕೆಲಸ ಮಾಡೋಣ ಎಂದರು.
ಹಾಸನ ಜಿಲ್ಲೆ ರಾಜಕಾರಣದಲ್ಲಿ ಪುಟ್ಟಸ್ವಾಮಿ ಗೌಡರ ಕುಟುಂಬ ರಾಜಕಾರಣಕ್ಕೆ ಹೊಸತಲ್ಲ. ಆ ಕುಟುಂಬ ಸ್ವಾರ್ಥದ ರಾಜಕಾರಣ ಮಾಡಲಿಲ್ಲ. ಇಲ್ಲಿ ಸಂಸದರಾಗಿದ್ದ ಮಾಜಿ ಪ್ರಧಾನಿ ದೇವೇಗೌಡರಾಗಲಿ ಅಥವಾ ಪ್ರಜ್ವಲ್ ಆಗಲಿ ಸಂಸದರಾಗಿ ಕಡೂರಿಗೆ ಗುರುತರವಾದ ಯಾವ ಕಾರ್ಯವನ್ನು ಮಾಡದೆ ಕಡೂರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದರು.ಇದೀಗ ಜನರಿಗೆ ಸ್ಪಂದಿಸುವ ಸಂಸದನನ್ನು ಆಯ್ಕೆ ಮಾಡುವ ನಿರ್ಧಾರವನ್ನು ಜನತೆ ಮಾಡಿದ್ದು ಶ್ರೇಯಸ್ ಪಟೇಲ್ ಗೆಲುವು ಸಾಧಿಸಲಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನೇತಾರರು ಪ್ರಚಾರಕ್ಕೆ ಬರಲಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ಐದು ಗ್ಯಾರಂಟಿ ಗಳನ್ನು ಅನುಷ್ಟಾನಗೊಳಿಸಿ ನುಡಿದಂತೆ ನಡೆದ ಸರ್ಕಾರವೆಂಬ ಹೆಸರು ಪಡೆದಿದೆ. ವಿರೋಧಿಗಳ ಟೀಕೆಗೆ ಬಗ್ಗದೆ ಕೇವಲ ಜನಪರ ಆಡಳಿತವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈ ಅಂಶಗಳನ್ನು ಕಾರ್ಯಕರ್ತರು ಜನತೆಗೆ ಸಮರ್ಥವಾಗಿ ವಿವರಿಸಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕು ಎಂದರು. ನಮ್ಮ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಸಿಗಲು ಬೂತ್ ಮಟ್ಟದ ಮುಖಂಡರು ಕಾರ್ಯಸೂಚಿ ಹಾಕಿ ಕೊಂಡು ಒಗ್ಗೂಡಿ ಶ್ರಮಿಸಬೇಕು ಎಂದು ಮನವಿ ಮಾಡಿದರು. ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ,ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ಈರಳ್ಳಿ ರಮೇಶ್, ಹಾಲಮ್ಮ, ಸಯ್ಯದ್ ಯಾಸೀನ್, ಮುಖಂಡರಾದ ಎಂ. ಆರ್ .ಟಿ. ಸುರೇಶ್, ಕರಿಬಡ್ಡೆ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಪಂಚನಹಳ್ಳಿಪ್ರಸನ್ನ, ಜಿ.ಪಿ.ಪ್ರಭುಕುಮಾರ್,ಕೆ.ಟಿ. ನರಸಿಂಹಪ್ಪ, ಗುಮ್ಮನಹಳ್ಳಿ ಅಶೋಕ್, ಕೆ.ಜಿ.ಶ್ರೀನಿವಾಸ ಮೂರ್ತಿ ಮತ್ತು ಬೂತ್ ಮಟ್ಟದ ಮುಖಂಡರು ಇದ್ದರು. 6ಕೆಕೆಡಿಯು1.ಶನಿವಾರ ಕಡೂರು ಪಟ್ಟಣದ ಟಿ.ಡಿ.ಎಸ್.ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಶಾಸಕ ಕೆ.ಎಸ್. ಆನಂದ್ ಮಾತನಾಡಿದರು.