ಹಣ ಹಂಚಿ ಗೆದ್ದವರಿಂದ ಜನಪರ ಆಡಳಿತ ಸಾಧ್ಯವಿಲ್ಲ

KannadaprabhaNewsNetwork |  
Published : Dec 18, 2025, 12:15 AM IST
17ಎಚ್ಎಸ್ಎನ್10 :  | Kannada Prabha

ಸಾರಾಂಶ

ಮತದಾರರಿಗೆ ನೋಟು ಕೊಟ್ಟು ಓಟು ಖರೀದಿ ಮಾಡಿ ಗೆದ್ದ ಎಂ.ಪಿ, ಎಂ ಎಲ್ ಎ ಗಳಿಂದ ರಚನೆಯಾದ ಸರ್ಕಾರಗಳು ಜನಪರವಾದ ಆಡಳಿತ ನೀಡಲು ಸಾಧ್ಯವಿಲ್ಲ. ಅವರು ತಾವು ಖರ್ಚು ಮಾಡಿದ ಹಣವನ್ನು ಸಂಪಾದಿಸಲು ವ್ಯಾಪಾರಿಗಳಾಗುತ್ತಾರೆಯೇ ವಿನಃ ಜನಸೇವಕರಾಗಲು ಸಾಧ್ಯವಿಲ್ಲ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮತದಾರರಿಗೆ ನೋಟು ಕೊಟ್ಟು ಓಟು ಖರೀದಿ ಮಾಡಿ ಗೆದ್ದ ಎಂ.ಪಿ, ಎಂ ಎಲ್ ಎ ಗಳಿಂದ ರಚನೆಯಾದ ಸರ್ಕಾರಗಳು ಜನಪರವಾದ ಆಡಳಿತ ನೀಡಲು ಸಾಧ್ಯವಿಲ್ಲ. ಅವರು ತಾವು ಖರ್ಚು ಮಾಡಿದ ಹಣವನ್ನು ಸಂಪಾದಿಸಲು ವ್ಯಾಪಾರಿಗಳಾಗುತ್ತಾರೆಯೇ ವಿನಃ ಜನಸೇವಕರಾಗಲು ಸಾಧ್ಯವಿಲ್ಲ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬಿಕ್ಕೋಡು ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಸಹಯೋಗ ದಿವಸ್ ಆಂದೋಲನದಲ್ಲಿ ಭಾಗಿಯಾಗಿ ಮಾತನಾಡಿದವರು ಸ್ವತಂತ್ರ ಬಂದಾಗಿನಿಂದಲೂ ಮನುವಾದಿ ಪಕ್ಷಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸದೆ ಕೇವಲ ಅಧಿಕಾರಕ್ಕೋಸ್ಕರ ಅಪಾರ ಪ್ರಮಾಣದ ಹಣ ವ್ಯಯ ಮಾಡಿ ಚುನಾವಣೆಗಳಲ್ಲಿ ಗೆದ್ದು ಬರುತ್ತಾರೆ. ಮನುವಾದಿ ಪಕ್ಷಗಳು ಬಂಡವಾಳ ಶಾಹಿಗಳಿಂದ ಸಾವಿರಾರು ಕೋಟಿ ರುಪಾಯಿ ಹಣವನ್ನು ದೇಣಿಗೆಯಾಗಿ ಪಡೆದು ಆ ಹಣದಿಂದಲೇ ಜನರಿಗೆ ಹಣ, ಹೆಂಡ, ಸಾರಾಯಿ, ಸೀರೆ-ಪಂಚೆ, ಬಿರಿಯಾನಿ ಹಂಚಿ ಮುಗ್ದ ಮತದಾರರ ಓಟು ಖರೀದಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಮನುವಾದಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ತಮಗೆ ದೇಣಿಗೆ ನೀಡಿದ ಬಂಡವಾಳ ಶಾಹಿಗಳ ಪರವಾದ ನೀತಿ ನಿಯಮಗಳನ್ನು ರೂಪಿಸುತ್ತಾರೆ. ಬಂಡವಾಳಶಾಹಿಗಳಿಗೆ ಪೂರಕವಾದ ಬಜೆಟ್ ಮಂಡಿಸುತ್ತಾರೆ ಇದರಿಂದಾಗಿ ಜನಸಾಮಾನ್ಯರು,ರೈತರು, ಮಹಿಳೆಯರು, ಯುವಕರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಬಡ. ಜನರ ಬದುಕು ಮುರಾಬಟ್ಟೆಯಾಗಿದೆ ಎಂದರು.

ಬಹುಜನ ಸಮಾಜ ಪಾರ್ಟಿಯು ತನ್ನ ಚುನಾವಣೆ ಖರ್ಚನ್ನು ಯಾವುದೇ ಬಂಡವಾಳಶಾಹಿಗಳಿಂದ ಪಡೆಯದೇ ಜನಸಾಮಾನ್ಯರಿಂದಲೇ ಆರ್ಥಿಕ ಸಹಯೋಗ ಆಂದೋಲನದ ಮೂಲಕ ಸಂಗ್ರಹಿಸಿ, ಚುನಾವಣೆ ನೆಡೆಸಿ ಜನಪರವಾದ ಆಡಳಿತ ನೆಡೆಸುವ ಮಹತ್ತರ ಉದ್ದೇಶ ಹೊಂದಿರುವ ಏಕೈಕ ಪಕ್ಷವಾಗಿದೆ. ಈ ಪ್ರಯೋಗವನ್ನು ಮಾನ್ಯವಾರ್ ಕಾನ್ಷಿರಾಂ ಮತ್ತು ಮಾಯಾವತಿಯವರು ಉತ್ತರ ಪ್ರದೇಶದಲ್ಲಿ ಕೈಗೊಂಡು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಬಿಎಸ್ಪಿ ಉಸ್ತುವಾರಿಗಳಾಗಿ ದೆಹಲಿಯಿಂದ ಆಗಮಿಸಿದ್ದ ದಿನೇಶ್ ಗೌತಮ್ ಜೀ ಅವರು ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಉತ್ತರಪ್ರದೇಶದ ಮಾದರಿಯಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಅಧಿಕಾರಕ್ಕೆ ತರುವ ಸಲುವಾಗಿ ಕಳೆದ ಎರಡು ಮೂರು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟುತ್ತಿರುವ ಗಂಗಾಧರ್‌ ಬಹುಜನ್ ಅವರನ್ನು ಈ ಬಾರಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಿಸಲು ತನು, ಮನ, ಧನಸಹಾಯ ನೀಡುವ ಮೂಲಕ ಕೈಜೋಡಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಗೆ ತೆರಳಿ ಮನೆಮನೆಗೆ ಭೇಟಿ ನೀಡಿ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಿದರು. ಈ ಆಂದೋಲನದಲ್ಲಿ ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ, ಜಿಲ್ಲಾ ಕಚೇರಿ ಕಾರ್ಯದರ್ಶಿ ಕಿರಣ್ ಕುಮಾರ್‌, ಜಿಲ್ಲಾ ಬಿವಿಫ್ ಸಂಯೋಜಕ ಹೇಮಂತ್ ನಿಟ್ಟೂರು, ಹೊಳೆನರಸೀಪುರ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ವಕೀಲರಾದ ರಾಜೇಶ್ ಸಾಣೆನಹಳ್ಳಿ, ಬೇಲೂರು ತಾಲೂಕು ಸಂಯೋಜಕ ಉಮೇಶ್, ತಾಲೂಕು ಅಧ್ಯಕ್ಷ ಪ್ರಕಾಶ್ ಕೆಸಗೋಡ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಾಧ್ಯಕ್ಷರಾದ ನಿಂಗರಾಜು, ಶ್ರೀಮತಿ ಜಯಲಕ್ಷ್ಮಿ, ಕಚೇರಿ ಕಾರ್ಯದರ್ಶಿ ಶ್ರೀನಾಥ್ ಮುದಿಗೆರೆ, ತಾಲೂಕು ಬಿಬಿಎಫ್ ಸಂಯೋಜಕ ಮನು, ಬಿಕ್ಕೋಡು ಹೋಬಳಿ ಅಧ್ಯಕ್ಷರಾದ ಮಲ್ಲೇಶ್ ಚಿಕ್ಕಬಿಕ್ಕೊಡು ಮುಖಂಡರಾದ ಪುಟ್ಟಸ್ವಾಮಿ ನಿಡುಮನಹಳ್ಳಿ, ದ್ಯಾವಪ್ಪಣ್ಣ ಸಾಲಾವರ, ನಾಗೇಂದ್ರ ಗಂಗಾವರ, ಶಿವಪ್ಪ ನೀಲನಹಳ್ಳಿ, ಹೊನ್ನಯ್ಯ ಗೋವಿನಹಳ್ಳಿ, ಕೇಶವ ಸಾಣೆನಹಳ್ಳಿ, ಮೂರ್ತಿ ಕೂಡ್ಲೂರು, ರುದ್ರೇಶ್ ಇಂಟಿತೊಳಲು, ನಿರಂಜನ್ ಸುನೀಲ್ ಕೌರಿ ಮುಂತಾದವರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಯವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಶಿಕ್ಷೆ
ಹೋರಾಟದ ಎಚ್ಚರಿಕೆಗೆ ಹೆದರಿ ದೆಹಲಿಗೆ ಅಧಿಕಾರಿಗಳ ದೌಡು