ಕೆ.ಎಂ. ಮಂಜುನಾಥ್
ಕನ್ನಡಪ್ರಭ ವಾರ್ತೆ ಬಳ್ಳಾರಿನಗರದ ತಾಳೂರು ರಸ್ತೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಕಾರ್ಯ ಕಲಾಪ ನಡೆಸುವ ಕಾಲ ಕೊನೆಗೂ ಕೂಡಿ ಬಂದಿದ್ದು, ಬುಧವಾರ ಸಂಕೀರ್ಣದಲ್ಲಿ 5 ನ್ಯಾಯಾಲಯಗಳು ಕಾರ್ಯಾರಂಭ ಮಾಡಿದವು.
ಹಳೆಯ ಕಟ್ಟಡದಲ್ಲಿದ್ದ 13 ನ್ಯಾಯಾಲಯಗಳ ಪೈಕಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಎಫ್‌ಟಿಎಸ್‌ಸಿ- 1 ನ್ಯಾಯಾಲಯ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು(ವಾಣಿಜ್ಯ ನ್ಯಾಯಾಲಯ), ಕೌಟುಂಬಿಕ ನ್ಯಾಯಾಲಯವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ಕಲಾಪಗಳನ್ನು ಆರಂಭಿಸಿದವು.ಕಳೆದ ವರ್ಷವೇ ಉದ್ಘಾಟನೆ:
₹121.90 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ನಿರ್ಮಿಸಲಾಗಿದ್ದು, ಇನ್ನೂ ಒಂದಷ್ಟು ಕಾಮಗಾರಿ ಬಾಕಿ ಇರುವಾಗಲೇ ಕಳೆದ ವರ್ಷದ ಜುಲೈ 26ರಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವರು ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿದರು.ಉಳಿದ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ₹21.90 ಕೋಟಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿನ ಕೆಲವು ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಸಂಕೀರ್ಣದಲ್ಲಿ ಕಾರ್ಯಕಲಾಪಗಳನ್ನು ಆರಂಭಿಸಲು ಸಾಧ್ಯವಾಗಲಿರಲಿಲ್ಲ.
ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಕುರಿತು ಹೆಚ್ಚು ಆಸ್ಥೆ ವಹಿಸಿ ಸಚಿವ ಸಂಪುಟದಲ್ಲಿರಿಸಿ ಹಣ ಬಿಡುಗಡೆಯಾಗುವಂತೆ ನೋಡಿಕೊಂಡರು. ಇದರಿಂದ ಬಾಕಿ ಕೆಲಸಗಳು ವೇಗ ಪಡೆದುಕೊಂಡವು.ಎಲ್ಲರಲ್ಲೂ ಸಂತಸ:
ಇದೀಗ 5 ಜಿಲ್ಲಾ ನ್ಯಾಯಾಲಯಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಉಳಿದ ನ್ಯಾಯಾಲಯಗಳು ಡಿಸೆಂಬರ್ 20ರೊಳಗೆ ಸ್ಥಳಾಂತರಗೊಳ್ಳಲಿವೆ.ಜಿಲ್ಲಾ ನ್ಯಾಯಾಲಯ ಸಂಕೀರ್ಣ ಬರುತ್ತಿದೆ ಎಂದು ಈ ಹಿಂದೆಯೇ ತಾಳೂರು ರಸ್ತೆಯ ಸ್ಥಳೀಯರು ಬಾಡಿಗೆ ಹೆಚ್ಚಳ ಮಾಡಿದ್ದರು. ಲೇಔಟ್ ಗಳ ಮಾಲೀಕರು ಸಹ ನಿವೇಶನಗಳ ದರ ವಿಪರೀತ ಏರಿಸಿದ್ದರು. ಇದೀಗ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಳ್ಳುತ್ತಿದ್ದಂತೆ ಈ ಭಾಗದ ಲೇಔಟ್ ಮಾಲೀಕರು ಖುಷಿಯಾಗಿದ್ದಾರೆ.
ಸುಸಜ್ಜಿತ ಸೌಕರ್ಯ: ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆಯಿತ್ತು. ಪಾರ್ಕಿಂಗ್ ಸಮಸ್ಯೆ ಇತ್ತು. ನೂತನ ಕಟ್ಟಡದಲ್ಲಿ ಅಗತ್ಯ ಸೌಕರ್ಯಗಳು ಸುಸಜ್ಜಿತವಾಗಿವೆ. ಕೀಲರು ಹಾಗೂ ಕಕ್ಷಿದಾರರಿಗೆ ಸಂತಸವಾಗಿದೆ ಎನ್ನುತ್ತಾರೆ ಬಳ್ಳಾರಿ ವಕೀಲರ ಸಂಘ ಅಧ್ಯಕ್ಷ ಕೆ. ಎರ್ರಿಗೌಡ.ಅನುಕೂಲ:
ನೂತನ ಕಟ್ಟಡಕ್ಕೆ ನ್ಯಾಯಾಲಯಗಳು ಸ್ಥಳಾಂತರಗೊಂಡಿರುವುದು ಹೆಚ್ಚು ಖುಷಿ ನೀಡಿದೆ. ನ್ಯಾಯಾಲಯ ಸಂಕೀರ್ಣವು ಅತ್ಯಂತ ಸುಸಜ್ಜಿತ ಹಾಗೂ ಮೂಲ ಸೌಕರ್ಯಗಳನ್ನು ಹೊಂದಿದೆ. ಇದರಿಂದ ಕಕ್ಷಿದಾರರಿಗೂ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಯುವ ವಕೀಲ ವಿಜಯ್ ಕುಮಾರ್.