ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರೈತರ ಜಮೀನಿನ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಆಳವಡಿಸಿ ರೈತರ ನೋಂದಣಿ ಸಂಖ್ಯೆ (ಎಫ್‌ಐಡಿ) ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳದಿದ್ದರೆ, ಬರ ಪರಿಹಾರ ಅಥವಾ ಸರ್ಕಾರದಿಂದ ಸಿಗುವ ಯಾವುದೇ ಸಹಾಯ ಧನದ ಸೌಲಭ್ಯ ಸಿಗುವುದಿಲ್ಲ. ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸು ವಂತೆ ತಿಳಿಸಿದರು.
ಗ್ರಾಮೀಣ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಎಷ್ಟು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸದ ರೈತರನ್ನು ಗುರುತಿಸಿ ನೋಂದಣಿಗೆ ಕ್ರಮವಹಿಸಿ, ಇದನ್ನು ವಿಶೇಷ ಆಂದೋಲನದ ರೀತಿ ಮಾಡುವಂತೆ ಹೇಳಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಶೇ.79 ರಷ್ಟು ಬಿತ್ತನೆಯಾಗಿದ್ದು, 2023-24 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಶೇ. 96 ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ ಎಂದರು.ಹಿಂಗಾರು ಬೆಳೆ ಮತ್ತು ಮೇವಿನ ಬೀಜದ ಮಿನಿಕಿಟ್ ಬಿತ್ತನೆ ಉತ್ಪಾದನೆಯಿಂದ ಸರಾಸರಿ 32,011 ಟನ್ ಮೇವು ಲಭ್ಯ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ 25 ವಾರಗಳಿಗೆ ಆಗುವಷ್ಟು ಮೇವಿದೆ. 2023-24 ಸಾಲಿನ ಮುಂಗಾರು ಬೆಳೆಯಲ್ಲಿ 22 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು ಒಟ್ಟಾರೆ ಜಿಲ್ಲೆಯಲ್ಲಿ 48 ವಾರಗಳಿಗೆ ಬೇಕಾಗುವಷ್ಟು ಮೇವಿನ ಲಭ್ಯತೆ ಇದೆ ಎಂದು ತಿಳಿಸಿದರು. 2023-24 ನೇ ಸಾಲಿನಲ್ಲಿ 18,301 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳು ಬಿತ್ತನೆ ಯಾಗಿದ್ದು, ಮಳೆ ಕೊರತೆಯಿಂದ ಅಜ್ಜಂಪುರ, ಕಡೂರು, ತರೀಕೆರೆ ತಾಲೂಕುಗಳಲ್ಲಿ 6549 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಂದಾಜು 556 ಲಕ್ಷ ಪರಿಹಾರ ಮೊತ್ತ ಅಂದಾಜಿಸಲಾಗಿದೆ. ಕುಡಿಯುವ ನೀರಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ಗ್ರಾಮಗಳಲ್ಲಿ ಯಾವ ಭೂಮಿ ಡಿಮ್ಡ್ ಫಾರೆಸ್ಟ್‌ಗೆ ಸೇರಿದೆ. ಯಾವ ಭೂಮಿ ಸ್ಟೇಟ್ ಫಾರೆಸ್ಟ್‌ನಲ್ಲಿದೆ. ಗೋಮಾಳ ಭೂಮಿಯನ್ನು ಒಂದು ತಿಂಗಳಲ್ಲಿ ಸರ್ವೆ ಮಾಡಿ ಪಟ್ಟಿ ಮಾಡಬೇಕು. ಈ ಮಾಹಿತಿಯನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಳಿಗೆ ನೀಡಿ ಗ್ರಾಪಂನಲ್ಲಿ ಪ್ರಕಟಿಸುವಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ರಾಜೇಂದರ್ ಕುಮಾರ್ ಕಟಾರಿಯಾ ಸೂಚಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಉಪ ವಿಭಾಗಾಧಿಕಾರಿಗಳಾದ ರಾಜೇಶ್, ಕಾಂತರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 21 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅಧ್ಯಕ್ಷತೆಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಇದ್ದರು.