ಕನ್ನಡಪ್ರಭ ವಾರ್ತೆ ಅರಕಲಗೂಡು
ಕೋಟೆ ಕೊತ್ತಲು ಗಣಪತಿ, ಲಕ್ಷ್ಮೀನರಸಿಂಹಸ್ವಾಮಿ, ಅಮೃತೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನಗಳಲ್ಲಿ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿದ ಬಳಿಕ ರಾತ್ರಿ 8 ಗಂಟೆಗೆ ಅರಕಲಗೂಡು ದಸರಾ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳ ವೈಭವದ
ಮೆರವಣಿಗೆಗೆ ಚಾಲನೆ ನೀಡಲಾಯಿತು.ಪಟ್ಟಣದ ಗ್ರಾಮದೇವತೆ ಸೇರಿ ವಿವಿಧ ದೇವತೆಗಳ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ವಿದ್ಯುತ್ ಬೆಳಕಿನಿಂದ ಅಲಂಕರಿಸಿದ್ದ ವಾಹನದಲ್ಲಿ ಇರಿಸಿ, ಉತ್ಸವ ಮೆರವಣಿಗೆ ನಡೆಸಲಾಯಿತು. ಈ ವೇಳೆ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.
ಕೋಟೆ ದೊಡ್ಡಮ್ಮ ದೇವಸ್ಥಾನದಿಂದ ಹೊರಟ ದಸರಾ ಮೆರವಣಿಗೆಯು ಅ.ನ.ಕೃ. ವೃತ್ತದ ಮಾರ್ಗವಾಗಿ ಪೇಟೆ ಬೀದಿ ಮೂಲಕ ಸಾಗಿ ಹಳ್ಳಿಮೈಸೂರು ವೃತ್ತದ ಬಳಿಯಿರುವ ಬನ್ನಿ ಮಂಟಪ ತಲುಪಿತು. ಬಳಿಕ ಪೂಜೆ ಮಾಡಲಾಯಿತು. ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರು ಕದಳಿ ಛೇದನ ನಡೆಸಿ ತಾಲೂಕಿಗೆ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಹರಸಿದರು.
ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಪಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.