ಹಾವೇರಿ: ನಗರದ ಕಾಗಿನೆಲೆ ಕ್ರಾಸ್ ಬಳಿ ವಿಶ್ವ ಹಿಂದು ಪರಿಷತ್ ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಬುಧವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.
ಹಿಂದು ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ ಗಣೇಶ ಮೂರ್ತಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಧ್ಯಾಹ್ನದ ವೇಳೆಗೆ ಕಾಗಿನೆಲೆ ಕ್ರಾಸ್‌ನಿಂದ ಆರಂಭಗೊಂಡ ಅದ್ಧೂರಿ ಮೆರವಣಿಗೆ ಕಲ್ಲುಮಂಟಪ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ಮಹಾತ್ಮ ಗಾಂಧಿ ವೃತ್ತ, ರಾಘವೇಂದ್ರಸ್ವಾಮಿ ಮಠ, ಸುಭಾಸ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಪುರದ ಓಣಿ, ಎಂ.ಜಿ. ರೋಡ್, ಜೆ.ಪಿ. ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ವಾಲ್ಮೀಕಿ ಸರ್ಕಲ್ ಮೂಲಕ ಕುಣಿಮೆಳ್ಳಳ್ಳಿ ಸಮೀಪದ ವರದಾ ನದಿಯತ್ತ ಸಾಗಿತು.ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕರು, ಯುವತಿಯರು, ಮಕ್ಕಳು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಸಂಜೆ ಆಗುತ್ತಿದ್ದಂತೆ ಬಣ್ಣಬಣ್ಣದ ಲೈಟಿಂಗ್, ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಸಾವಿರಾರು ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತ ಸಾಗಿದರು.
ಕೇಸರಿ ಶಾಲು ತಿರುಗಿಸುತ್ತ, ಬಣ್ಣ ಎರಚುತ್ತ ಯುವಕರು ಹುಚ್ಚೆದ್ದು ಕುಣಿದರು. ಮಹಿಳೆಯರು, ಮಕ್ಕಳು, ಯುವಕರ ಸಂಭ್ರಮ ಮುಗಿಲು ಮುಟ್ಟಿತು. ಕೆಲವರಂತೂ ಸ್ನೇಹಿತರ ಹೆಗಲ ಮೇಲೇರಿಕೊಂಡು ಕುಣಿದರು. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳ ಮನೆಗಳ ಎದುರು, ಮನೆ ಚಾವಣಿ ಮೇಲೆ ಜನರು ನಿಂತು ಗಣೇಶ ವಿಸರ್ಜನಾ ಮೆರವಣಿಗೆ ಕಣ್ತುಂಬಿಕೊಂಡರು. ನಗರದ ಜನತೆ ರಾತ್ರಿವರೆಗೂ ನಿಂತು ಮೆರವಣಿಗೆ ನೋಡಿದರು.ಶೋಭಾಯಾತ್ರೆಯಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ಆಂಜನೇಯ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಶೋಭಾಯಾತ್ರೆಯಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಈ ವೇಳೆ ಹಿಂದು ಪರಿಷತ್ ಪ್ರಮುಖ ಎಸ್.ಆರ್. ಹೆಗಡೆ, ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ರಮೇಶ ಆನವಟ್ಟಿ, ದೀಪಕ್ ಮಡಿವಾಳರ ಸೇರಿದಂತೆ ಹಲವರಿದ್ದರು.