ಹುಚ್ಚುನಾಯಿ ಕಚ್ಚಿ ಎರಡು ವರ್ಷದ ಬಳಿಕ ರೇಬಿಸ್ ನಂಜಾಗಿ ಸಾವು

KannadaprabhaNewsNetwork |  
Published : Sep 25, 2025, 01:00 AM IST
24ಕೆಪಿಎಲ್23 ರಾಮಪ್ಪ ಕರಿಗಾಯಿ | Kannada Prabha

ಸಾರಾಂಶ

ಕಳೆದ ಹದಿನೈದು ದಿನಗಳ ಹಿಂದೆ ಮಳೆಯಲ್ಲಿ ವಿಪರೀತ ಸುತ್ತಾಡಿದ್ದರಿಂದ ಹುಚ್ಚು ನಾಯಿ ಕಚ್ಚಿ ಗಾಯವಾಗಿದ್ದ ಕಾಲಿಗೆ ಮತ್ತೆ ನಂಜಾಗಿ ಗಾಯವಾಗಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಹುಚ್ಚು ನಾಯಿ ಕಡಿದ ನಂಜು ಮತ್ತೆ ಕಾಣಿಸಿಕೊಂಡು ಎರಡು ವರ್ಷದ ಬಳಿಕ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರುಬಂಡಿ ಗ್ರಾಮದಲ್ಲಿ ನಡೆದಿದ್ದು, ವೈದ್ಯ ಕ್ಷೇತ್ರಕ್ಕೂ ಅಚ್ಚರಿ ಮೂಡಿಸಿದೆ. ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಕರಿಗಾರ (65) ಎನ್ನುವ ವ್ಯಕ್ತಿಯೇ ಮಂಗಳವಾರ ಮೃತಪಟ್ಟಿದ್ದಾರೆ.

ಇವರಿಗೆ ಎರಡು ವರ್ಷಗಳ ಹಿಂದೆ ಹುಚ್ಚು ನಾಯಿಯೊಂದು ತೀವ್ರವಾಗಿ ಕಡಿದು ಗಾಯಗೊಳಿಸಿತ್ತು. ಅದರಲ್ಲೂ ಕಾಲಿಗೆ ವಿಪರೀತ ಗಾಯವಾಗಿದ್ದು, ವಾಸಿಯಾಗಲು ಸುಮಾರು ತಿಂಗಳುಗಳೇ ಬೇಕಾಯಿತು.

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಯೇ ಇವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆಗಲೂ ರೇಬಿಸ್‌ಗೆ ಕೊಡುವ ಮದ್ದು ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿದ್ದರಿಂದ ಗುಣಮುಖವಾಗಿದ್ದರು.

ಮತ್ತೆ ನಂಜಾದ ಗಾಯ:

ಕಳೆದ ಹದಿನೈದು ದಿನಗಳ ಹಿಂದೆ ಮಳೆಯಲ್ಲಿ ವಿಪರೀತ ಸುತ್ತಾಡಿದ್ದರಿಂದ ಹುಚ್ಚು ನಾಯಿ ಕಚ್ಚಿ ಗಾಯವಾಗಿದ್ದ ಕಾಲಿಗೆ ಮತ್ತೆ ನಂಜಾಗಿ ಗಾಯವಾಗಿದೆ. ಹೀಗೆ ಗಾಯವಾದ ಮೇಲೆ ರಾಮಪ್ಪ ಕರಿಗಾರ ಹುಚ್ಚುಚ್ಚಾಗಿ ಆಡುತ್ತಿದ್ದರು. ಅಷ್ಟೇ ಅಲ್ಲ ನೀರಿನ ಸಪ್ಪಳ ಕೇಳಿದರೆ ಸಾಕು ಬೆಚ್ಚಿ ಬೀಳುತ್ತಿದ್ದರು. ನೀರನ್ನು ಕಂಡರೆ ಆಗುತ್ತಿರಲಿಲ್ಲ.

ಪುನಃ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಲ್ಲಿಯೂ ಸರಿಯಾಗಿ ಚಿಕಿತ್ಸೆ ಪಡೆಯಲು ಸಹಕಾರ ನೀಡದೆ ಹುಚ್ಚುಹುಚ್ಚಾಗಿ ಆಡಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಯಾರಾದರೂ ಲೋಟಕ್ಕೆ ನೀರು ಹಾಕುವುದು ಸೇರಿದಂತೆ ನೀರು ಹಾಕುವ ಸಪ್ಪಳ ಕೇಳಿದರೆ ಬೆಚ್ಚಿಬೀಳುತ್ತಿದ್ದರಂತೆ.

ಇದು ರೇಬಿಸ್‌ನಿಂದಾಗಿಯೇ ಹೀಗೆ ಆಗಿದೆ. ಎರಡು ವರ್ಷಗಳ ಹಿಂದೆ ಕಡಿದದ್ದು ಈಗ ಮತ್ತೆ ಅದು ಪರಿಣಾಮ ಬೀರಿದೆ, ಮನೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ ವೈದ್ಯರು. ಮನೆಗೆ ಹೋಗಿ ಎರಡೇ ದಿನಕ್ಕೆ ಅವರು ನಿಧನರಾಗಿದ್ದಾರೆ.

ವೈದ್ಯಲೋಕಕ್ಕೂ ಅಚ್ಚರಿ:

ಹುಚ್ಚು ನಾಯಿ ಕಡಿದ ತಕ್ಷಣ ಚಿಕಿತ್ಸೆ ಪಡೆದು ಗುಣಮುಖವಾಗಿ ಎರಡು ವರ್ಷದ ನಂತ ಮತ್ತೆ ಅದೇ ನಂಜು ಕಾಣಿಸಿಕೊಂಡಿರುವುದು ಹಾಗೂ ನಂಜು ಆಗಿರುವುದು ಮತ್ತು ರೇಬಿಸ್ ಸಹ ಮರುಕಳಿಸಿರುವುದು ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಒಂದು ವರ್ಷದವರೆಗೂ ಇದು ಪರಿಣಾಮ ಆಗುವ ಸಾಧ್ಯತೆ ಇದೆ. ಎರಡು ವರ್ಷಗಳ ನಂತರವೂ ರೇಬಿಸ್ ಪರಿಣಾಮ ಬೀರಿರುವುದು ಅಚ್ಚರಿಯಾಗಿದೆ ಎನ್ನುತ್ತಾರೆ ವೈದ್ಯರು.

ಮಗಿಮಳೆಯಿಂದ ಹೀಗಾಗಿದೆ:

ನಾಯಿ ಕಡಿಸಿಕೊಂಡವರು ಮಗಿ ಮಳೆಯಲ್ಲಿ ತೋಯಿಸಿಕೊಳ್ಳಬಾರದು ಎನ್ನುವ ಪ್ರತೀತಿ ಹಳ್ಳಿಯಲ್ಲಿ ಈಗಲೂ ಇದೆ. ಅದರಲ್ಲೂ ಹುಚ್ಚು ನಾಯಿ ಕಡಿಸಿಕೊಂಡವರು ಮಗಿಮಳೆಯಲ್ಲಿ ತೋಯಿಸಿಕೊಳ್ಳಲೇ ಬಾರದು ಎನ್ನುತ್ತಾರೆ. ಮಗಿ ಮಳೆಯಲ್ಲಿ ತೋಯಿಸಿಕೊಂಡಿದ್ದರಿಂದಲೇ ಹೀಗಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಹುಚ್ಚು ನಾಯಿ ಕಡಿದು ರೇಬಿಸ್ ಆಗಿದ್ದರಿಂದ ಈ ರೀತಿಯಾಗರಬಹುದು. ಆದರೂ ತಕ್ಷಣಕ್ಕೆ ಸಿಗಬೇಕಾದ ಎಲ್ಲ ಚಿಕಿತ್ಸೆಯನ್ನು ಪಡೆದಿದ್ದರೆ ಈ ರೀತಿಯಾಗುವುದಿಲ್ಲ. ಆದರೆ, ಇದು ಅಚ್ಚರಿಯಾಗುತ್ತದೆ ಎಂದು ಪಶುವೈದ್ಯ ಡಾ. ಚಂದ್ರಶೇಖರ ಹೇಳಿದರು.

ಎರಡು ವರ್ಷಗಳ ನಂತರ ಮತ್ತೆ ರೇಬಿಸ್ ಲಕ್ಷಣ ಕಾಣಿಸಿರುವುದು ಅಚ್ಚರಿಯಾಗಿದೆ. ಆದರೂ ಈ ಕುರಿತು ಕೇಸ್ ಸ್ಟಡಿ ಮಾಡುತ್ತೇವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣ ಓಂಕಾರ ತಿಳಿಸಿದ್ದಾರೆ.ನಮ್ಮ ತಂದೆಯವರು ಮಳೆಯಲ್ಲಿ ಹೆಚ್ಚು ಓಡಾಡಿದ್ದರಿಂದ ಹೀಗೆ ಆಗಿದೆ ಎಂದು ಎಲ್ಲರೂ ಹೇಳುತ್ತಾರೆ. ನಮ್ಮ ತಂದೆಯನ್ನು ಮಾತನಾಡಿಸಲು ಬರುವ ಹಿರಿಯರು ಹೇಳುವ ಪ್ರಕಾರ ಹುಚ್ಚು ನಾಯಿ ಕಡಿದಾಗ ಹದಿನೈದು ವರ್ಷಗಳವರೆಗೂ ಶಕ (ಪರಿಣಾಮ) ಇರುತ್ತದೆ ಎಂದಿದ್ದಾರೆ ಮೃತ ರಾಮಪ್ಪ ಕರಿಗಾರ ಪುತ್ರ ಅನಿಲ ಕರಿಗಾರ ತಿಳಿಸಿದ್ದಾರೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ