- ಮೊದಲ ದಿನ 60ಕ್ಕೂಹೆಚ್ಚು ರೈತರ ಹೆಸರು ನೋಂದಾವಣೆ
ಹೊನ್ನಾಳಿ: ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮೆಕ್ಕೆಜೋಳವನ್ನು ನಿಯಂತ್ರಿತ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆ ಅಧಾರದ ಮೇಲೆ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲು ಸರ್ಕಾರದ ಸೂಚನೆಯಂತೆ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ವತಿಯಿಂದ ಜ.12ರ ಸೋಮವಾರದಿಂದ ರೈತರ ನೋಂದಣಿ ಕಾರ್ಯ ಆರಂಭಗೊಂಡಿದೆ. ಇದು ಒಂದು ತಿಂಗಳ ಅವಧಿಯವರೆಗೆ ಇರುತ್ತದೆ ಎಂದು ಎಂ.ಪಿ.ಎಂ.ಸಿ. ಕಾರ್ಯದರ್ಶಿ ಮಂಜುನಾಥ ಹೇಳಿದರು.
ಎ.ಪಿ.ಎಂ.ಸಿ. ಕಚೇರಿಯಲ್ಲಿ ಮಹಾಮಂಡಳ ವತಿಯಿಂದ ರೈತರ ಹೆಸರು ನೋಂದಣಿ ಕಾರ್ಯ ಆರಂಭಗೊಂಡ ಸಂದರ್ಭ ಅವರು ಮಾತನಾಡಿದರು. ಈಗಾಗಲೇ ಮೆಕ್ಕೆಜೋಳ ಖರೀದಿ ಕುರಿತು ಶನಿವಾರ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಅದರಂತೆ ರೈತರ ನೋಂದಣೆ ಕಾರ್ಯಕ್ರಮ ಚಾಲನೆಗೊಂಡಿದೆ. ರೈತರು ಆಧಾರ್ ಕಾರ್ಡ್, ಪಹಣಿ, ಕೃಷಿ ಇಲಾಖೆ ನೀಡಿರುವ ಎಫ್.ಐ.ಡಿ. ನಂಬರ್‌ನೊಂದಿಗೆ ಕಚೇರಿಗೆ ಆಗಮಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಸರ್ಕಾರಿ ಸೌಲಭ್ಯದ ಸದುಪಯೋಗ ಪಡೆಯಬಹುದು ಎಂದು ತಿಳಿಸಿದರು.ರೈತರು ಎ.ಪಿ.ಎಂ.ಸಿ.ಯಲ್ಲಿ ನೋಂದಾಯಿತ ವರ್ತಕರಿಗೆ ಮೆಕ್ಕೆಜೋಳ ಮಾರಾಟ ಮಾಡಬೇಕು. ಅನಂತರ ಮೆಕ್ಕೆಜೋಳದ ಧಾರಣೆಗೆ ನಿಯಂತ್ರಿತ ಮಾರುಕಟ್ಟೆಯಲ್ಲಿ ಅಗುವ ವಹಿವಾಟಿನ ಆಧಾರದ ಮೇಲೆ ರೈತರಿಗೆ ದರ ವ್ಯತ್ಯಾಸದ ಮೊತ್ತವನ್ನು ಸರ್ಕಾರದಿಂದ ಪಾವತಿಸಲಾಗುವುದು ಎಂದು ತಿಳಿಸಿದರು.
ನೋಂದಣಿ ಆರಂಭಗೊಂಡಿರುವ ಮೊದಲ ದಿನವಾದ ಸೋಮವಾರ ಸುಮಾರು 60ಕ್ಕೂಹೆಚ್ಚು ಜನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲ ರೈತರಿಗೆ ತಾವು ಬೆಳೆದ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ಮಾರಾಟಕ್ಕಾಗಿ ತರಲು ಸೂಚಿಸಲಾಗಿದೆ ಎಂದು ಎ.ಪಿ.ಎಂ.ಸಿ. ಕಾರ್ಯದರ್ಶಿ ತಿಳಿಸಿದರು.- - -
-12ಎಚ್.ಎಲ್.ಐ2:ಮೆಕ್ಕೆಜೋಳ ಖರೀದಿಗಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದಿಂದ ಜ.12 ರಿಂದ ರೈತರ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಮೊದಲ ದಿನ 60ಕ್ಕೂ ಹೆಚ್ಚು ರೈತರು ತಮ್ಮ ಹೆಸರು ನೋಂದಾಯಿಸಿಕೊಂಡರು.