ಹಾಲು ಖರೀದಿ ದರ ಕಡಿತಕ್ಕೆ ಉತ್ಪಾದಕರ ಆಕ್ರೋಶ

KannadaprabhaNewsNetwork | Published : Apr 8, 2025 12:35 AM

ಸಾರಾಂಶ

ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾನಿಯಾದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರೈತರು ಆಗ್ರಹಿಸಿದರು.

ಹಾವೇರಿ: ಹಾವೇರಿ ಜಿಲ್ಲಾ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ ಕಡಿತಗೊಳಿಸಿದ್ದನ್ನು ಖಂಡಿಸಿ ಹಾಗೂ ಪ್ರತಿ ಲೀಟರ್‌ ಹಾಲಿಗೆ ಸರ್ಕಾರ ಹೆಚ್ಚಿಸಿರುವ ₹4ಅನ್ನು ಕಡಿತಗೊಳಿಸದೇ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾದ್ಯಂತ ಸೋಮವಾರ ಪ್ರತಿಭಟನೆ ನಡೆದವು.

ಸಂಘಟನೆಯ ತಾಲೂಕು ಘಟಕದಿಂದ ಸೋಮವಾರ ನಗರದ ಹಾವೆಮುಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹಾಲು ಒಕ್ಕೂಟದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ತಾಲೂಕುಗಳಲ್ಲಿ ರೈತ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲಾ ರೈತ ಸಂಘದ ಸತತ ಹೋರಾಟದ ಫಲವಾಗಿ ಧಾರವಾಡ ಹಾಲು ಒಕ್ಕೂಟದಿಂದ ಹಾವೇರಿ ಹಾಲು ಒಕ್ಕೂಟ ಬೇರ್ಪಟ್ಟು ಎರಡು ವರ್ಷ ಗತಿಸಿದೆ. ಆದರೆ ಕಳೆದ ಪ್ರತಿ ಲೀಟರ್ ಹಾಲಿಗೆ ₹3.50 ದರ ಕಡಿತಗೊಳಿಸಿ ರೈತರಿಗೆ ದ್ರೋಹ ಮಾಡಿತ್ತು. ಜಿಲ್ಲಾ ರೈತ ಸಂಘದ ಹೋರಾಟದ ಎಚ್ಚರಿಕೆಗೆ ಮಣಿದು ಹಾಲು ಒಕ್ಕೂಟವು ಏ. 6ರಂದು ತುರ್ತು ಸಭೆ ನಡೆಸಿ ದರ ಕಡಿತಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಪ್ರತಿ ಲೀಟರ್‌ಗೆ ₹2.50 ಹೆಚ್ಚಳ ಮಾಡಿ ಆದೇಶ ಮಾಡಿರುವುದು ಸ್ವಾಗತಾರ್ಹ. ಆದರೆ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹4 ಹೆಚ್ಚಳ ಮಾಡಿದ್ದು, ಅದರಲ್ಲಿ ಜಿಲ್ಲಾ ಹಾಲು ಒಕ್ಕೂಟ ₹1.50 ಕಡಿತಗೊಳಿಸಿರುವುದು ಖಂಡನೀಯ ಎಂದರು.

ಸರ್ಕಾರ ಹೊಸದಾಗಿ ಜಿಲ್ಲಾ ಹಾಲು ಒಕ್ಕೂಟ ರಚಿಸಿದ ನಂತರ ಭೂಮಿ ಮಂಜೂರು ಮಾಡಿ ನೂರಾರು ಕೋಟಿ ರು. ಅನುದಾನ ನೀಡಿ ಹೊಸ ಒಕ್ಕೂಟದ ಕಚೇರಿಯಲ್ಲಿ ಸಿಬ್ಬಂದಿ ನೇಮಿಸಿತ್ತು. ಒಕ್ಕೂಟದಲ್ಲಿ ತಮ್ಮ ಲಾಭಕ್ಕಾಗಿ ದುರಾಡಳಿತ ನಡೆಸಿ ಎರಡು ವರ್ಷಗಳಲ್ಲಿ ₹20 ಕೋಟಿ ಹಾನಿ ಮಾಡಿ ಅದನ್ನು ರೈತರ ಮೇಲೆ ಹಾಕಿ ಸುಲಿಗೆ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ ಎಂದರು.

₹20 ಕೋಟಿ ನಷ್ಟಕ್ಕೆ ಹಿಂದಿನ ಆಡಳಿತ ಮಂಡಳಿ ಹೊಣೆ ಹೊರತು, ರೈತರಿಂದ ನಷ್ಟ ಆಗಿಲ್ಲ. ಒಕ್ಕೂಟದ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಇದರ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾನಿಯಾದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರೈತ ಮುಖಂಡರಾದ ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೊವಿ, ಮಂಜುನಾಥ ಕದಂ, ಜಾನ್ ಪುನೀತ್, ವೀರಬಸಪ್ಪ ಕರಡಿ, ರಾಘವೇಂದ್ರ ರೆಡ್ಡಿ, ಶಶಿಧರಗೌಡ ಪಾಟೀಲ, ಯಲ್ಲಪ್ಪ ಪೂಜಾರ, ನಿಂಗನಗೌಡ ಅಗಡಿ, ಪ್ರಕಾಶ ಬೆಳವಗಿ ಇತರರು ಇದ್ದರು.

Share this article