ಪ್ರೊ.ಎ.ಎನ್.ಮೂರ್ತಿರಾವ್‌ ಮನುಷ್ಯನಲ್ಲಿರುವ ತಳಮಳ, ನಂಬಿಕೆ ತೆರೆದಿಟ್ಟಿದ್ದಾರೆ: ಎಂ.ಜಿ.ರೇವಣ್ಣ

KannadaprabhaNewsNetwork |  
Published : Jun 15, 2026, 02:45 AM IST
14ಕೆಎಂಎನ್ ಡಿ18 | Kannada Prabha

ಸಾರಾಂಶ

ಅಕ್ಕಿಹೆಬ್ಬಾಳು ಸಾಹಿತ್ಯ ಕೃಷಿಕರ ಬೀಡು. ಎ.ಎನ್.ಮೂರ್ತಿರಾಯರು, ಅ.ರಾ.ಮಿತ್ರ, ಅ.ನ.ಸುಬ್ಬರಾವ್, ಖ್ಯಾತ ನಾಟಕಕಾರ ಆಕಾಶವಾಣಿ ಈರಣ್ಣ ಎಂದೇ ಪ್ರಸಿದ್ದರಾಗಿದ್ದ ಎ.ಎಸ್.ಮೂರ್ತಿ ಅಕ್ಕಿಹೆಬ್ಬಾಳಿನ ಹಿರಿಮೆ ಗರಿಮೆಯನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಎತ್ತಿ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾಹಿತಿ ಪ್ರೊ.ಎ.ಎನ್.ಮೂರ್ತಿರಾವ್‌ ಅವರು ತಮ್ಮ ಬರಹಗಳಲ್ಲಿ ಮನುಷ್ಯನ ಅಂತರಾಳದ ತಳಮಳಗಳು, ಸಂಶಯಗಳು ಮತ್ತು ನಂಬಿಕೆಗಳನ್ನು ಸರಳ ಭಾಷೆಯಲ್ಲಿ ತೆರೆದಿಟ್ಟಿದ್ದಾರೆ ಎಂದು ಉಪನ್ಯಾಸಕ ಎಂ.ಜಿ.ರೇವಣ್ಣ ಬಣ್ಣಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳಿನ ಸರ್ಕಾರಿ ಪ್ರೌಢಶಾಲಾ ಆವರಣದ ರಂಗ ಮಂದಿರದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಷನ್, ಹೇಮಾವತಿ ಹೊನ್ನಾರು ವೇದಿಕೆ ಮತ್ತು ಅಕ್ಕಿಹೆಬ್ಬಾಳು ಚಿಂತಕರ ವೇದಿಕೆ ಆಶ್ರಯದಲ್ಲಿ ಖ್ಯಾತ ಸಾಹಿತಿ ಪ್ರೊ.ಎ.ಎನ್. ಮೂರ್ತಿರಾವ್‌ ಅವರ ಜನ್ಮದಿನಾಚರಣೆಯನ್ನು ಉದ್ಯಾನವನದಲ್ಲಿ ಶ್ರಮದಾನದೊಂದಿಗೆ ಅತಿಥಿಗಳು ಮತ್ತು ಸಭಿಕರು ಆಚರಿಸಿದ ವೇಳೆ ಮಾತನಾಡಿದರು.

ಮೂರ್ತಿರಾಯರ ಸಾಹಿತ್ಯವು ಕುರುಡು ನಂಬಿಕೆಗಳನ್ನು ಪ್ರಶ್ನಿಸುತ್ತಲೇ ಮನುಷ್ಯ ವಿವೇಚನೆಯಿಂದ ಬದುಕುವುದನ್ನು ಕಲಿಸುತ್ತದೆ ಎಂದು ರಾಯರ ಅಕ್ಕಿಹೆಬ್ಬಾಳು, ಅಲೆಯುವ ಮನ, ಅಪರ ವಯಸ್ಕನ ಅಮೆರಿಕಾ ಯಾತ್ರೆ ಮುಂತಾದ ಕೃತಿಗಳನ್ನು ವಿಶ್ಲೇಷಿಸಿ, ಪ್ರಬಂಧ ಸಾಹಿತ್ಯಕ್ಕೆ ಮತ್ತು ಪ್ರವಾಸ ಸಾಹಿತ್ಯಕ್ಕೆ ರಾಯರ ಕೊಡುಗೆ ಸ್ಮರಿಸಿದರು.

ಅಕ್ಕಿಹೆಬ್ಬಾಳು ಸಾಹಿತ್ಯ ಕೃಷಿಕರ ಬೀಡು. ಎ.ಎನ್.ಮೂರ್ತಿರಾಯರು, ಅ.ರಾ.ಮಿತ್ರ, ಅ.ನ.ಸುಬ್ಬರಾವ್, ಖ್ಯಾತ ನಾಟಕಕಾರ ಆಕಾಶವಾಣಿ ಈರಣ್ಣ ಎಂದೇ ಪ್ರಸಿದ್ದರಾಗಿದ್ದ ಎ.ಎಸ್.ಮೂರ್ತಿ ಅಕ್ಕಿಹೆಬ್ಬಾಳಿನ ಹಿರಿಮೆ ಗರಿಮೆಯನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಎತ್ತಿ ಹಿಡಿದಿದ್ದಾರೆ ಎಂದರು.

ಮೈಸೂರಿನ ಎಸ್.ಡಿ.ಎಮ್.ಕಾಲೇಜಿನ ಕನ್ನಡ ಅಧ್ಯಾಪಕ ಪ್ರೊ.ಮಾರುತಿ ಪ್ರಸನ್ನ, ದೇವರು ಕೃತಿಯ ಮಹತ್ವ ಮತ್ತು ವಿದ್ಯಾರ್ಥಿಗಳ ಬದುಕಿನಲ್ಲಿ ಅದರ ಅಗತ್ಯತೆಯ ಕುರಿತು ಮೌಲಿಕ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಪಿ.ಪ್ರತಿಮಾ ಅವರು, ದೇವರು ಮನುಷ್ಯನ ಸೃಷ್ಟಿಯೋ ಅಥವಾ ಮನುಷ್ಯ ದೇವರ ಸೃಷ್ಟಿಯೋ ಎಂಬ ಪ್ರಶ್ನೆಗಿಂತ, ಮನುಷ್ಯತ್ವವನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯ ಎಂಬ ಮೂರ್ತಿರಾಯರ ಆಶಯವನ್ನು ನೆನಪಿಸಿ ಇಂದಿನ ಯುವ ಪೀಳಿಗೆಗೆ ಅವರ ಚಿಂತನೆಗಳ ಅಗತ್ಯತೆಯನ್ನು ಒತ್ತಿ ಹೇಳಿದರು.

ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಶನ್ ಮುಖ್ಯಸ್ಥರಾದ ಶಶಿಧರ ಭಾರಿಘಾಟ್, ಉಮಾಶಂಕರಸ್ವಾಮಿ, ಕತ್ತರಘಟ್ಟ ವಾಸು, ಜಯಕುಮಾರ್, ಮೊಹಮ್ಮದ್‌ ಅಜರುದ್ದೀನ್ ಅಕ್ಕಿಹೆಬ್ಬಾಳು, ಅಭಿನಂದನ್ , ಫೌಂಡೇಶನ್ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯ-ಸಿಬ್ಬಂದಿ ಕಾಳಜಿಯಿಂದ ರೋಗಿಗಳಿಗೆ ಉತ್ತಮ ಸೇವೆ: ವಿಶಾಲಾಕ್ಷಿ ಪದ್ಮನಾಬ್
ಕೆಫೆಕ್ ಸಂಸ್ಥೆಯಿಂದ ರೈತ ಉತ್ಪಾದಕ ಕಂಪನಿಗಳಿಗೆ ಒಂದು ಕೋಟಿ ರು.ವರೆಗೆ ಸಾಲ ಸೌಲಭ್ಯ