- ಡಾ.ಅಂಬೇಡ್ಕರ್- ಪ್ರೊ.ಕೃಷ್ಣಪ್ಪ ಸಾಧನೆಗಳ ವಿಶೇಷ ಉಪನ್ಯಾಸದಲ್ಲಿ ಎಂ.ಗುರುಮೂರ್ತಿ ।
ಕನ್ನಡಪ್ರಭ ವಾರ್ತೆ ಹರಿಹರ
ಪ್ರೊ. ಬಿ.ಕೃಷ್ಣಪ್ಪ ಅವರು ನಡೆಸಿದ ಹಲವಾರು ಹೋರಾಟಗಳ ಪರಿಣಾಮ ಕರ್ನಾಟಕದಲ್ಲಿ ದಲಿತ ಸಮುದಾಯದವರ ಆತ್ಮಸ್ಥೈರ್ಯ ಹೆಚ್ಚಾಯಿತು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.ನಗರದ ಎಸ್‌ಜೆವಿಪಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ. ಬಿ.ಕೃಷ್ಣಪ್ಪರವರ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೨೦ನೇ ಶತಮಾನದ ೪ ದಶಕಗಳ ಹೋರಾಟದ ಮೂಲಕ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಕ್ಷಣೆಗಾಗಿ ಅತ್ಯಂತ ಸಮರ್ಥವಾಗಿ ಮುಖಾಮುಖಿಯಾದ ಕೃಷ್ಣಪ್ಪನವರು ರಾಜ್ಯದ ಬಹುದೊಡ್ಡ ಹೋರಾಟಗಾರರಾಗಿ ಹೊರಹೊಮ್ಮಿದರು. ಅಖಂಡ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಆಲೋಚನೆಗಳನ್ನು ರಾಜ್ಯದ ಕೇರಿ ಕೇರಿಗಳಲ್ಲಿ ಬಿತ್ತಿದ ಕೃಷ್ಣಪ್ಪನವರು ಒಂದು ಹೊಸ ಸಾಂಸ್ಕೃತಿಕ ಪ್ರಜ್ಞೆಯ ವಲಯ ಕಟ್ಟುವ ಮೂಲಕ ದಲಿತರ ಬದುಕಿಗೆ ದಾರಿದೀಪವಾದರು ಎಂದರು.
ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕ ಪ್ರೊ. ಬಿ.ಎಲ್. ರಾಜು ಡಾ.ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿ, ವಿವಿಧ ವಿಷಯಗಳಲ್ಲಿ ಭಾರತವೂ ಸೇರಿದಂತೆ ಲಂಡನ್, ಅಮೇರಿಕಾ ವಿಶ್ವವಿದ್ಯಾನಿಲಯಗಳಿಂದ ೩೦ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್ ಅವರಿಗೆ ಸಹಜವಾಗಿ ಸಂವಿಧಾನ ರಚನೆ ಜವಾಬ್ದಾರಿ ವಹಿಸಲಾಯಿತು. ದಲಿತ, ಹಿಂದುಳಿದ, ಅಲ್ಪಸಖ್ಯಾತರ ಹಾಗೂ ಮಹಿಳೆಯರ ನಿಕೃಷ್ಟ ಬದುಕನ್ನು ಗಮನಿಸಿದ ಅಂಬೇಡ್ಕರ್ ಅವರು ಇವರ ಸಂರಕ್ಷಣೆಗಾಗಿಯೇ ವಿಶೇಷ ಕಾಳಜಿ ವಹಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಪ್ರೊ. ರಮೇಶ್ ಕೆ. ಪರ್ವತಿ, ಕದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಪ್ರಸ್ತಾವನೆ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಎನ್.ಎಚ್. ಪಾಟೀಲ ಮಾತನಾಡಿದರು. ಕಡ್ಲೆಗೊಂದಿ ತಿಮ್ಮಣ್ಣ, ಕಡತಿ ನಾಗರಾಜಪ್ಪ, ಸಂಜೀವ್, ಅಣ್ಣಪ್ಪ, ಬಸವರಾಜ್, ರಾಜಪ್ಪ ಇದ್ದರು.
- - -
ಉಪನ್ಯಾಸ ಕಾರ್ಯಕ್ರಮವನ್ನು ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಉದ್ಘಾಟಿಸಿದರು.