ಹುಬ್ಬಳ್ಳಿ: ಪ್ರೊ. ಗುರುರಾಜ ಕಲಕೋಟಿ ಅವರು ಹುಬ್ಬಳ್ಳಿಯನ್ನೇ ಗೆದ್ದವರು. ನಿವೃತ್ತಿಯ ನಂತರವೂ ವಿಶ್ರಮಿಸದೆ ಸದಾ ಕ್ರಿಯಾಶೀಲರಾಗಿದ್ದರು. ಅವರಲ್ಲಿ ಅಪಾರ ಜ್ಞಾನವಿತ್ತು. ಆದರೆ, ಆ ಜ್ಞಾನದ ಬಗ್ಗೆ ಅವರಿಗೆ ಎಂದಿಗೂ ಅಹಂಕಾರವಿರಲಿಲ್ಲ. ಅವರು ಅತಿ ಸರಳತೆಯಿಂದ ಬದುಕಿದರು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಕೋಟಿಯವರು ನಮ್ಮೆಲ್ಲರ ಆತ್ಮೀಯರಾಗಿದ್ದರು. ಹಿರಿಯರಿಗೆ ಹಿರಿಯರಾಗಿ, ಕಿರಿಯರಿಗೆ ಕಿರಿಯರಾಗಿ ಹಾಗೂ ಅತ್ಯಂತ ಶ್ರದ್ಧೆಯ ಹಿರಿಯರಾಗಿ ಎಲ್ಲರ ಜತೆ ಬೆರೆತಿದ್ದರು. ನಾವೆಲ್ಲರೂ ಒಂದೇ ತರಹದ ಒಡನಾಟ ಹೊಂದಿದ್ದೆವು. ಅವರೆಲ್ಲರ ಆತ್ಮೀಯರಾಗಿ, ಕಲಕೋಟಿಯವರು ಎಲ್ಲರಿಗೂ ನೆನಪಿನಲ್ಲಿ ಉಳಿಯುವಂತಹ ವ್ಯಕ್ತಿತ್ವ ಹೊಂದಿದ್ದರು. ಅವರ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೊ ಅವರೆಲ್ಲರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಹ ವಿಶಿಷ್ಟ ವ್ಯಕ್ತಿತ್ವ ಅವರದಾಗಿತ್ತು. ಅವರೊಂದಿಗೆ ಕಳೆದ ಒಡನಾಟ ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಲಕೋಟಿಯವರು ಇಡೀ ಹುಬ್ಬಳ್ಳಿಯನ್ನು ಆವರಿಸಿಕೊಂಡಿದ್ದ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದರು. ನಮಗೆ ಅವರೊಂದಿಗೆ ಬಹಳ ಅದ್ಭುತ, ಪ್ರೀತಿ ಮತ್ತು ವಿಶ್ವಾಸದ ಸಂಬಂಧವಿತ್ತು. ಅವರು ತಮಗಾಗಿ ಏನನ್ನೂ ಬಯಸದೆ, ಸದಾ ಇತರರ ಒಳಿತಿಗಾಗಿ ಶ್ರಮಿಸಿದ ಮಹಾನ್ ಪರೋಪಕಾರಿಯಾಗಿದ್ದರು ಎಂದರು.ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರೊ. ಕಲಕೋಟಿ ಕೇವಲ ಪ್ರಾಧ್ಯಾಪಕರಾಗಿ ಇರಲಿಲ್ಲ. ಬದಲಾಗಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ರೂಪಿಸುವ ಶಿಲ್ಪಿಯಾಗಿದ್ದರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರು ಮಾಡಿದ ಕಾರ್ಯಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತವೆ. ಒಬ್ಬ ಶಿಕ್ಷಕರಿಗೆ ಯಾವುದೇ ಪ್ರಶಸ್ತಿಗಿಂತ ಅವರ ವಿದ್ಯಾರ್ಥಿಗಳು ಅವರಿಗೆ ನೀಡುವ ಗೌರವ ಅತ್ಯಂತ ದೊಡ್ಡದು, ಇಂತ ಗೌರವಕ್ಕೆ ಪ್ರೊ. ಕಲಕೋಟಿ ಪಾತ್ರರಾಗಿದ್ದರು ಎಂದು ಬಣ್ಣಿಸಿದರು.
ಕೆಎಲ್‌ಇ ನಿರ್ದೇಶಕ ಹಾಗೂ ವಿಪ ಸದಸ್ಯ ಮಹಾಂತೇಶ ಕವಟಗಿಮಠ, ಹಿರಿಯರಾದ ಶಂಕ್ರಣ್ಣ ಮುನವಳ್ಳಿ, ಇ.ವಿ. ಹುಡೇದ, ನಿವೃತ್ತ ಐ.ಎ.ಎಸ್. ಅಧಿಕಾರಿ ಎಂ.ಜಿ. ಹಿರೇಮಠ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಹಿರೇಮಠ, ಭುವನೇಶ್ವರಿ ಚಮಕೋಡ, ವೀರೇಶ ಬಳ್ಳಾರಿ, ಇ.ವಿ. ಹುಡೇದ, ಲಿಂಗರಾಜ ಅಂಗಡಿ, ವಿ.ಎಸ್. ಪಾಟೀಲ್, ಶಿವಾನಂದ ಸೇಬಣ್ಣನವರ, ಎಸ್.ಎಂ. ತೋಗರ್ಸಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ವಿಜಯಾ ಕಲಕೋಟಿ ಸೇರಿದಂತೆ ಹಲವರಿದ್ದರು.