ದಲಿತರಲ್ಲಿ ಜಾಗೃತಿಯ ದೀಪ ಹಚ್ಚಿದ ಪ್ರೊ.ಕೃಷ್ಣಪ್ಪ

KannadaprabhaNewsNetwork |  
Published : Jun 10, 2025, 06:45 AM IST
09 hrr. 01ಹರಿಹರ ಸಮೀಪದ ಬೈಪಾಸ್ ಬಳಿಯ ಮೈತ್ರಿವನದಲ್ಲಿರುವ  ಪ್ರೊ.ಬಿ. ಕೃಷ್ಣಪ್ಪರ ಸಮಾಧಿ ಸ್ಥಳದಲ್ಲಿ ಕದಸಂಸ ತಾಲೂಕು ಘಟಕದಿಂದ ಸೋಮವಾರ ಪ್ರೊ.ಬಿ. ಕೃಷ್ಣಪ್ಪರ ೮೭ನೇ ಜಯಂತಿ ನಿಮಿತ್ತ ಪುಷ್ಪಾರ್ಚನೆ ಮಾಡಲಾಯಿತು. | Kannada Prabha

ಸಾರಾಂಶ

ರಾಜ್ಯದ ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದ ಕೀರ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್ ಹೇಳಿದ್ದಾರೆ.

- ೮೭ನೇ ಜಯಂತಿ ಅಂಗವಾಗಿ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಕೆ.ನಾಗರಾಜ್‌ । ದಲಿತರ ಗಟ್ಟಿಧ್ವನಿ ಕೃಷ್ಣಪ್ಪ: ಮಹಾಂತೇಶ

- - -

ಕನ್ನಡಪ್ರಭ ವಾರ್ತೆ ಹರಿಹರ

ರಾಜ್ಯದ ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದ ಕೀರ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್ ಹೇಳಿದರು.

ನಗರದ ಬೈಪಾಸ್ ಬಳಿಯ ಮೈತ್ರಿವನದಲ್ಲಿರುವ ಪ್ರೊ. ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಲ್ಲಿ ಕ.ದ.ಸಂ.ಸ. ತಾಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಅವರ ೮೭ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ, ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿ ದೇಶದಲ್ಲಿ ಸಾಮಾಜಿಕ ಸಮಾನತೆಗೆ ದಾರಿ ಮಾಡಿಕೊಟ್ಟರು. ಆ ಸಂವಿಧಾನದಿಂದ ಪ್ರೇರಣೆಗೊಂಡ ಕೃಷ್ಣಪ್ಪ ಅವರು ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ನಿರ್ವಹಿಸುವಾಗ ರಾಜ್ಯಾದ್ಯಂತ ಸಂಚರಿಸಿ, ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದರು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾ ನಾಯ್ಕ ಮಾತನಾಡಿ, ಪ್ರೊ.ಕೃಷ್ಣಪ್ಪ ಅವರ ಶ್ರಮದಿಂದಾಗಿ ರಾಜ್ಯದಲ್ಲಿ ಅತ್ಯದ್ಭುತ ದಲಿತ ಚಳವಳಿ ನಡೆಯಲು ಸಾಧ್ಯವಾಯಿತು. ಚಳವಳಿಯ ಪರಿಣಾಮ ಹಲವು ದಲಿತಪರ ಕಾನೂನುಗಳು, ಯೋಜನೆಗಳು ರಚನೆಯಾದವು. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ದಲಿತ ಮುಖಂಡರ ಉಗಮವೂ ಆಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಪ್ರೊ. ಬಿ.ಕೃಷ್ಣಪ್ಪರಂತಹ ವಿದ್ಯಾವಂತ, ಪ್ರಾಮಾಣಿಕ ವ್ಯಕ್ತಿ ತಮ್ಮ ಕುಟುಂಬದ ಹಿತಾಸಕ್ತಿ ಬದಿಗೊತ್ತಿ ಹಗಲು, ರಾತ್ರಿಯೆನ್ನದೇ ರಾಜ್ಯಾದ್ಯಂತ ಸಾವಿರಾರು ಕಿ.ಮೀ. ಸಂಚರಿಸಿ, ಸಂಘಟನೆಗೆ ಶ್ರಮಿಸಿದ್ದರು. ಇದರ ಪರಿಣಾಮವಾಗಿ ರಾಜ್ಯದಲ್ಲಿ ದಲಿತ ಸಮುದಾಯಗಳಿಗೆ ಗಟ್ಟಿಧ್ವನಿ ಬಂದಿತು. ಇಂತಹ ಹೋರಾಟದ ಕಿಚ್ಚು ಇಂದಿನ ದಲಿತ ಸಮುದಾಯದ ಯುವಕರಲ್ಲಿ ಮೂಡಬೇಕಿದೆ ಎಂದರು.

ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ಹಾಗೂ ಧರ್ಮದ ಆಸರೆಯಲ್ಲಿ ನಡೆಯುತ್ತಿದ್ದ ಹತ್ತಾರು ಮೌಢ್ಯಗಳ ವಿರುದ್ಧ ಕೃಷ್ಣಪ್ಪ ಅವರು ಜನಜಾಗೃತಿ ಮೂಡಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಯೋಜನೆ ಆರಂಭಕ್ಕೂ ಸಹ ಇವರ ಒತ್ತಾಸೆಯೇ ಕಾರಣ ಎಂದು ತಿಳಿಸಿದರು.

ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ ಮಾತನಾಡಿ, ಡಾ.ಅಂಬೇಡ್ಕರ್‌ ಹಾಗೂ ಪ್ರೊ. ಬಿ.ಕೃಷ್ಣಪ್ಪ ಅವರು ವಿದ್ಯಾವಂತರಾಗಿದ್ದರಿಂದಲೇ ದಲಿತ ಹಕ್ಕನ್ನು ಕೇಳಲು, ಪಡೆಯಲು ಸಾಧ್ಯವಾಯಿತು. ವಿದ್ಯೆಗೆ ಇಂತಹ ಶಕ್ತಿ ಇದೆ. ದಲಿತ ಹಾಗೂ ಶೋಷಣೆಗೀಡಾವದರು ಹಬ್ಬ, ಹರಿದಿನ, ಜಾತ್ರೆಗಳಿಗೆ ವೆಚ್ಚ ಮಾಡುವ ಬದಲು ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗ ಮಾಡಲಿ ಎಂದರು.

ಸಂಘಟನೆ ಪದಾಧಿಕಾರಿ ಸಿದ್ದರಾಮಣ್ಣ ಬುಳ್ಳಸಾಗರ ಮಾತನಾಡಿ, ಪ್ರೊ. ಬಿ.ಕೃಷ್ಣಪ್ಪ ಅವರೊಂದಿಗೆ ಸೇರಿ ೭೦ರ ದಶಕದಲ್ಲಿ ನಡೆದ ಹಲವು ಹೋರಾಟಗಳಲ್ಲಿ ನಾನೂ ಭಾಗವಹಿಸಿದ್ದೆ. ಕೃಷ್ಣಪ್ಪ ಅವರಲ್ಲಿದ್ದ ಪ್ರಾಮಾಣಿಕತೆ, ಸಮುದಾಯದ ಕಾಳಜಿಯಿಂದಾಗಿ ಸರ್ಕಾರಗಳು ಅವರ ಮಾತಿಗೆ ತಲೆಬಾಗುತ್ತಿದ್ದವು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಕಡ್ಲೆಗೊಂದಿ, ಗ್ರಾಮ ಪಂಚಾಯಿತಿ ಸದಸ್ಯೆ ಮಾತೆಂಗೆಮ್ಮ , ಹನುಮಂತಪ್ಪ ನಂದಿಗಾವಿ, ಮಂಜಪ್ಪ ಗುಳದಹಳ್ಳಿ, ಯಲವಟ್ಟಿಯ ಹನುಮಂತರಾಜ್ ಎಚ್., ಕೀರ್ತಿಕುಮಾರ್ ಟಿ., ಹರೀಶ್, ಜಿಗಳಿ ಚೌಡಪ್ಪ, ಭಾನುವಳ್ಳಿಯ ಹರೀಶ್ ಎಸ್.ಕೆ., ಮಂಜುನಾಥ್, ಪ್ರಕಾಶ್ ವಿ., ಹರೀಶ್ ಎಂ., ಸ್ವಾಮಿಲಿಂಗಪ್ಪ ಕೆ., ದಿವಾಕರ, ಸಿ.ಚೌಡಪ್ಪ, ಕುಂದವಾಡ ಹಾಲೇಶ್, ಚಿತ್ತನಹಳ್ಳಿ ನಾಗರಾಜ್, ಎಲೆಕ್ಟ್ರಿಕಲ್ ಮಂಜುನಾಥ್, ಹಾಲಮ್ಮ, ಪವಿತ್ರ, ಸಿದ್ದಮ್ಮ, ಆನಂದಪ್ಪ, ಪರಮೇಶ್, ನಾಗರಾಜ್, ಸಂಜೀವ್ ಹಾಗೂ ಇತರರಿದ್ದರು.

- - -

-09hrr01:

ಹರಿಹರ ಸಮೀಪದ ಬೈಪಾಸ್ ಬಳಿಯ ಮೈತ್ರಿವನದಲ್ಲಿರುವ ಪ್ರೊ. ಬಿ.ಕೃಷ್ಣಪ್ಪ ಸಮಾಧಿ ಸ್ಥಳದಲ್ಲಿ ಕದಸಂಸ ತಾಲೂಕು ಘಟಕದಿಂದ ಸೋಮವಾರ ಪ್ರೊ. ಬಿ.ಕೃಷ್ಣಪ್ಪರ ೮೭ನೇ ಜಯಂತಿ ನಿಮಿತ್ತ ಪುಷ್ಪಾರ್ಚನೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''