- ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ । ಬೇಡಿಕೆಗಳಿಗೆ ಸ್ಪಂದಿಸಿದ ಜನಪ್ರತಿನಿಧಿಗಳು। ಎಂಪಿ, ಎಂಎಲ್‌ಎ, ಎಂಎಲ್‌ಸಿಗಳು ಭಾಗಿ
ರೈತರ ಹಾಗೂ ಜನರ ಬದುಕಿಗೆ ಕೊಳ್ಳಿ ಇಟ್ಟಿರುವ ಅರಣ್ಯ ಇಲಾಖೆಯ ವಿರುದ್ಧ ವಿವಿಧ ಸಂಘಟನೆಗಳು ಸೋಮವಾರ ಜಿಲ್ಲಾ ಕೇಂದ್ರದಲ್ಲಿ ಕರೆ ನೀಡಿದ್ದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾಫಿ ಬೆಳೆಗಾರರು, ಸಾರ್ವಜನಿಕರು ಭಾಗವಹಿಸಿದ್ದರು.
ಈ ಮೆರವಣಿಗೆಯಲ್ಲಿ ಸಂಸದರು, ಜಿಲ್ಲೆಯ ಐದು ಮಂದಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಮೂಡಿಗೆರೆ ರೈತ ಹಿತರಕ್ಷಣಾ ವೇದಿಕೆ, ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ತಾಲೂಕು ಕಚೇರಿಯಿಂದ ಹೊರಟ ಮೆರವಣಿಗೆ ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್ ಪಾರ್ಕ್ ವೃತ್ತ ತಲುಪಿದ ಬಳಿಕ ಸಾರ್ವಜನಿಕ ಸಭೆ ನಡೆಸಲಾಯಿತು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಇದು, ರೈತರ ಬದುಕಿನ ಹೋರಾಟವಾಗಿದೆ. ಕಾಫಿ ಬೆಳೆಗಾರರು ಎಂದಾಕ್ಷಣ, ಉನ್ನತ ಅಧಿಕಾರಿಗಳು ಭಾವಿಸಿರುವುದು ಶ್ರೀಮಂತರೆಂದು. ಆದರೆ, ಇಲ್ಲಿ ಶೇ.90 ಜನ ಸಣ್ಣ ಹಾಗೂ ಅತಿ ಸಣ್ಣ ಬೆಳೆಗಾರರು ಇದ್ದಾರೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಇವರುಗಳ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಕೆ. ರಘು ಸ್ವಾಗತಿಸಿದರು. ಹೋರಾಟ ಸಮಿತಿಯ ಅಧ್ಯಕ್ಷ ಎಸ್. ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡಿಗೆರೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಕಡೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಸಾಗುವಳಿ ಚೀಟಿ ನೀಡುವಲ್ಲಿ ಅಕ್ರಮವಾಗಿದೆ ಎಂಬ ಕಾರಣಕ್ಕೆ ಇತರೆ ಜನರಿಗೂ ತೊಂದರೆಯಾಗಿದೆ. ಹಾಗಾಗಿ ಜಿಲ್ಲಾಡಳಿತ ಕಾಲಮಿತಿಯೊಳಗೆ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು. ನೈಜ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಸಭೆಯಲ್ಲಿ ಶಾಸಕರಾದ ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು. 9 ಕೆಸಿಕೆಎಂ 2ಜಿಲ್ಲೆಯಲ್ಲಿ ಉದ್ಭವಿಸಿರುವ ರೈತರ ಹಾಗೂ ಅರಣ್ಯ ಇಲಾಖೆ ನಡುವಿನ ಸಂಘರ್ಷವನ್ನು ತಪ್ಪಿಸಿ ರೈತರ ಜನ ಜೀವನ ರಕ್ಷಿಸಿ ಬ್ಯಾನರ್ ನಡಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸೋಮವಾರ ಚಿಕ್ಕಮಗಳೂರಿನಲ್ಲಿ ಮೆರವಣಿಗೆ ನಡೆಯಿತು.