ಪ್ರತಿ ಕ್ಷೇತ್ರದಲ್ಲಿ ವೃತ್ತಿಕೌಶಲ್ಯ ಅತ್ಯಂತ ಮುಖ್ಯ: ವಿಜಯಕುಮಾರ್‌

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಯಾವುದೇ ವೃತ್ತಿಯಲ್ಲಿ ಮುಂದುವರಿಯಲು, ಸಾಧನೆ ಮೆರೆಯಲು ಕೌಶಲ್ಯತೆ ಎಂಬುದು ಬಹಳ ಮುಖ್ಯ. ವೃತ್ತಿಗೆ ಪೂರಕವಾದ ಕೌಶಲ್ಯಗಳನ್ನು ಒದಗಿಸಲು ಸರ್ಕಾರ, ಸಂಘ ಸಂಸ್ಥೆಗಳು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಸದ್ಬಳಕೆ ಪಡೆಯಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರೂ ಕೌಶಲ್ಯದ ಕೊರತೆ ಎದುರಿಸುತ್ತಿದ್ದಾರೆ. ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಕಲಿಕೆಯೂ ಮುಖ್ಯ. ವಿದ್ಯಾರ್ಥಿ ಪರಿಪೂರ್ಣ ಜ್ಞಾನದ ಜತೆಯಲ್ಲಿ ಕೌಶಲ್ಯ ಕಲಿಕೆಗೂ ಪ್ರಾಮುಖ್ಯತೆ ನೀಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.

ನಗರದ ಎಜುರೈಟ್ ಕಾಲೇಜಿನ ಸಭಾಂಗಣದಲ್ಲಿ ಶಿವಮೊಗ್ಗ ನಾಲೆಡ್ಜ್ ಫೋರಂ ಹಾಗೂ ಎಜುರೈಟ್ ಕಾಲೇಜ್ ವತಿಯಿಂದ ಆಯೋಜಿಸಿದ್ದ ಅಂತರ ಕಾಲೇಜು ಕ್ವಿಜ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿ ಉದ್ಯೋಗ ಕ್ಷೇತ್ರದಲ್ಲಿ ನಾವು ಯಶಸ್ಸನ್ನು ಸಾಧಿಸಲು ಶಿಕ್ಷಣದ ಜೊತೆ ಕೌಶಲ್ಯವು ಅತ್ಯಂತ ಅಗತ್ಯವಾದ ಸಾಧನವಾಗಿದೆ. ಕೌಶಲ್ಯದ ಕಲಿಕೆಯಿಂದ ವೃತ್ತಿಯಲ್ಲಿ ಹಂತ ಹಂತವಾಗಿ ಉನ್ನತ ಸ್ಥಾನಕ್ಕೆ ಏರಬಹುದಾಗಿದೆ ಎಂದು ತಿಳಿಸಿದರು.

ಇಂದಿನ ವಿದ್ಯಾರ್ಥಿಗಳು ಪ್ರಶ್ನೆ ಮಾಡುವ, ಚರ್ಚಿಸುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಯಾವುದೇ ಒಂದು ವಿಷಯವನ್ನು ಸಹ ಅಲಕ್ಷ್ಯ ಮಾಡಬಾರದು. ಸಣ್ಣ ಸಣ್ಣ ಸಾಮಾನ್ಯ ಜ್ಞಾನ ಕೂಡ ಅತ್ಯಂತ ಅಗತ್ಯವಾಗಿ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅವಕಾಶ ಪಡೆಯಲು, ಯಶಸ್ಸನ್ನು ಸಾಧಿಸಲು ಕೌಶಲ್ಯವು ಅತ್ಯಂತ ಅಗತ್ಯ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸ್ಕಿಲ್ ಡೆವಲಪ್ಮೆಂಟ್ ಸಮಿತಿ ಪ್ರಮುಖರಾದ ಸವಿತಾ ಮಾಧವ್ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂತಹ ಕ್ವಿಜ್ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಬೇಕು. ಗುಂಪು ಚರ್ಚೆಗಳನ್ನು ಮಾಡಬೇಕು. ಯಶಸ್ವಿಗಳ ಪುಸ್ತಕಗಳನ್ನು ಓದುವುದರ ಜೊತೆಗೆ ಜ್ಞಾನಭಂಡಾರ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಶಿವಮೊಗ್ಗ ನಾಲೆಡ್ಜ್ ಫೋರಂ ಜಿಲ್ಲೆಯ ಎಲ್ಲ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಹಾಗೂ ಸಾಧನೆ ಮಾಡಲಿ ಎಂಬ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಶಿವಮೊಗ್ಗ ನಾಲೆಡ್ಜ್ ಫೋರಂ ಅಧ್ಯಕ್ಷ ಡಾ. ಶಂಕರ್ ನಾರಾಯಣ್ ಮಾತನಾಡಿ, ಇಂದು ವಿದ್ಯಾರ್ಥಿಗಳು ಎಷ್ಟು ಕಲಿತರೂ ಸಾಲದು. ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ಮೂಡುತ್ತಿರುತ್ತವೆ. ತಮ್ಮ ವಿದ್ಯಾಭ್ಯಾಸದ ಜೊತೆಗೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿರಬೇಕು ಎಂದರು.

ನಾಲೆಡ್ಜ್ ಫೋರಂ ವತಿಯಿಂದ ಶಿವಮೊಗ್ಗ ಹಾಗೂ ಜಿಲ್ಲಾದ್ಯಂತ ಮಕ್ಕಳ ವ್ಯಕ್ತಿತ್ವ ವಿಕಸನ, ಜ್ಞಾನಾರ್ಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಅವರ ಭವಿಷ್ಯದ ಕೈಗನ್ನಡಿ ಆಗುತ್ತೇವೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಂತರ ಕಾಲೇಜು ಕ್ವಿಜ್ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಸನ್ನಾ, ಮಂಜುನಾಥ್, ಮೋಹನ್, ಕಿರಣ್ ಉಡುಪ, ಶಿಖೇರ್ ಧವನ್, ಅಮಿತ್ ಕುಮಾರ್, ತೇಜೋನಿಧಿ, ವರ್ಷಿತಾ ಮತ್ತಿತರರು ಉಪಸ್ಥಿತರಿದ್ದರು.

- - - -7ಎಸ್‌ಎಂಜಿಕೆಪಿ01:

ಅಂತರ ಕಾಲೇಜು ಕ್ವಿಜ್ ಕಾರ್ಯಕ್ರಮವನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಉದ್ಘಾಟಿಸಿದರು.

Share this article