ವಿವಿಧ ಕ್ಷೇತ್ರಗಳ ಸಾಧಕರು ರೋಲ್ ಮಾಡೆಲ್ ಆಗಬೇಕು: ಶಾಸಕ ಎಚ್.ಟಿ.ಮಂಜು

KannadaprabhaNewsNetwork | Published : Sep 6, 2024 1:08 AM

ಸಾರಾಂಶ

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು. ಇಂದು ಮಕ್ಕಳು ದಾರಿತಪ್ಪದಂತೆ ದಂಡಿಸುವ ಪದ್ಧತಿ ಈಗ ಇಲ್ಲ. ಕನಿಷ್ಠ ದಂಡನೆಯಿಲ್ಲದೆ ಶಿಸ್ತಿನ ಕಲಿಕೆ ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ರೋಲ್ ಮಾಡೆಲ್ ಆಗಬೇಕು. ಈಗಿನ ಯುವ ಸಮುದಾಯಕ್ಕೆ ಮಚ್ಚು, ಲಾಂಗು ಹಿಡಿದವರು, ದಾರಿತಪ್ಪಿದ ಸಿನಿಮಾ ನಟರು ರೋಲ್ ಮಾಡೆಲ್‌ಗಳಾಗಿ ಬಿಂಬಿಸಲಾಗುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜಮುಖಿ ವ್ಯಕ್ತಿತ್ವ ಹೊಂದಿವರು ಸಮಾಜದ ರೋಲ್ ಮಾಡೆಲ್‌ಗಳನ್ನಾಗಿ ಬಿಂಬಿಸಬೇಕು. ಶಿಕ್ಷಕರ ದಿನಾಚರಣೆ ಗುರುಗಳನ್ನು ಸ್ಮರಿಸುವ ದಿನ. ನಾವೆಲ್ಲರೂ ಗುರುವಿನ ಋಣದಲ್ಲಿಯೇ ಬೆಳೆದಿದ್ದೇವೆ, ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಕರು ಹಾಕಿಕೊಟ್ಟ ಮಾರ್ಗದರ್ಶನ ನಡೆಯುವುದು ಬಹಳ ಮುಖ್ಯ ಎಂದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು. ಇಂದು ಮಕ್ಕಳು ದಾರಿತಪ್ಪದಂತೆ ದಂಡಿಸುವ ಪದ್ಧತಿ ಈಗ ಇಲ್ಲ. ಕನಿಷ್ಠ ದಂಡನೆಯಿಲ್ಲದೆ ಶಿಸ್ತಿನ ಕಲಿಕೆ ಸಾಧ್ಯವಿಲ್ಲ ಎಂದರು.

ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬ ಶಿಕ್ಷಕನೂ ತನ್ನ ವೃತ್ತಿ ಬಗ್ಗೆ ಅಭಿಮಾನ ಹೊಂದಬೇಕು. ತರಗತಿಯಲ್ಲಿ ಮಕ್ಕಳಿಗೆ ನೈಜ ಅನುಭವಗಳನ್ನು ಒಳಗೊಂಡ ಶಿಕ್ಷಣ ನೀಡಬೇಕು ಎಂದರು.

ಇಂದಿಗೂ ಶಿಕ್ಷಕರನ್ನು ಜನತೆ ಗೌರವದಿಂದ ಕಾಣುತ್ತಾರೆ ಎಂದರೆ ಅವರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಗುರುವಿನಲ್ಲಿ ಇರುತ್ತಾರೆ. ಇಂತಹ ಗೌರವಾನ್ವಿತ ಹುದ್ದೆಯಲ್ಲಿ ಇರುವ ನೀವೆಲ್ಲರೂ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಮಕ್ಕಳಿಗೂ ಉತ್ತಮ ನೀತಿಯುತ, ಮೌಲ್ಯಯುತ ಶಿಕ್ಷಣ ನೀಡಬೇಕು ಎಂದರು.

ಅನಿರೀಕ್ಷತವಾಗಿ ವೇದಿಕೆಗೆ ಆಗಮಿಸಿ ಶಿಕ್ಷಕರಿಗೆ ಶುಭಾಶಯ ತಿಳಿಸಿದ ಶಾಸಕ ಎಚ್.ಟಿ.ಮಂಜು ಅವರ ಪುತ್ರಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ವರ್ಷಾ ಎಂ.ಗೌಡ ತಮ್ಮ ಆಕರ್ಷಕ ಮಾತುಗಳಿಂದ ಎಲ್ಲರ ಗಮನ ಸೆಳೆದರು. ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳಾಗಬೇಕು. ತರಗತಿ ಆಚೆಗೂ ಕಲಿಸುವ ಗುಣವುಳ್ಳವರೇ ನಿಜವಾದ ಶಿಕ್ಷಕರೆಂದು ಹೇಳುವ ಮೂಲಕ ಶಿಕ್ಷಕ ಸಮುದಾಯದಿಂದ ಚಪ್ಪಾಳೆ ಗಿಟ್ಟಿಸಿದರು.

ಇದೇ ವೇಳೆ ಕಳೆದ ಸಾಲಿನಲ್ಲಿ ನಿವೃತ್ತರಾದ ಹಾಗೂ ಆಕಾಲಿಕ ಮರಣಕ್ಕೆ ತುತ್ತಾದ ಶಿಕ್ಷಕರ ಕುಟುಂಬದವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಹಾಗೂ ಅತಿ ಹೆಚ್ಚು ಅಂಕಗಳಿಸಿದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ತಹಸೀಲ್ದಾರ್ ಜಿ.ಆದರ್ಶ, ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ತಾಪಂ ಇಒ ಸುಷ್ಮ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕಾರ್ಯದರ್ಶಿ ಪಿ.ಜೆ.ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಕಾರ್ಯದರ್ಶಿ ವಿಜಿನಾರಾಯಣ, ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಕಾರ್ಯದರ್ಶಿ ವೆಂಕಟೇಗೌಡ, ಕ್ಷೇತ್ರ ಸಮ್ವಯಾಧಿಕಾರಿ ಎಚ್.ಕೆ.ಮಂಜುನಾಥ್, ಅಕ್ಷರದಾಸೋಹ ಎಡಿಪಿಒ ಸಿ.ಎನ್.ಯತೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುಕುಮಾರ್ ಸೇರಿದಂತೆ ವಿರಾರು ಶಿಕ್ಷಕರು ಹಾಜರಿದ್ದರು.

Share this article