ಕನ್ನಡಪ್ರಭ ವಾರ್ತೆ ಬೀದರ್
ಬೆಳೆವಾರು ಸೂಕ್ತವಾದ ಯೋಜನೆ ರೂಪಿಸಿ, ಅದರಂತೆ ರೈತರು ನಿಖರವಾದ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಬೆಳೆ ಉತ್ಪಾದನೆ ಖರ್ಚು ತಗ್ಗಿಸಿ ಜೊತೆಗೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಸುನೀಲಕುಮಾರ ಎನ್.ಎಮ್. ತಿಳಿಸಿದರು.ಪ್ರಮುಖ ಮುಂಗಾರು ಬೆಳೆಗಳ ಬೇಸಾಯಕ್ಕೆ ರೈತರು ಮಾಡಿಕೊಳ್ಳಬೇಕಾದ ಸಿದ್ಧತೆ ಹಾಗೂ ಶುಂಠಿ ಬೆಳೆ ಉತ್ಪಾದನೆ ಕುರಿತು ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ದಿನದ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ಆರಂಭದಲ್ಲಿ ಬರುವ ಹಂಗಾಮಿನಲ್ಲಿ ಮಳೆ ಮತ್ತು ಹವಾಮಾನದ ಕುರಿತು ಡಾ.ಬಸವರಾಜ ಹವಾಮಾನ ತಜ್ಞರು ಕೃಷಿ ಸಂಶೋಧನಾ ಕೇಂದ್ರ, ಬೀದರ್ ಇವರು ವಿವರವಾದ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ತಾಂತ್ರಿಕ ಅಧಿಕಾರಿ ಧನರಾಜ ವಿ.ಎಸ್. ಮಣ್ಣು ಮಾದರಿ ಪರಿಕ್ಷೆ ಮತ್ತು ಅದರ ಫಲಿತಾಂಶಂದ ಆಧಾರದ ಮೇಲೆ ಬೆಳೆಗಳಿಗೆ ಪೋಷಕಾಂಶಗಳ ಕುರಿತು ವಿವರಿಸಿದರು.ತರಬೇತಿಯಲ್ಲಿ ಮುಂಗಾರು ಬೆಳೆಗಳಲ್ಲಿ ತಳಿಗಳ ಆಯ್ಕೆ ಬೀಜೋಪಚಾರ ಮತ್ತು ಬೇಸಾಯ ಕ್ರಮ ಕುರಿತು ಡಾ. ಜ್ಞಾನದೇವ ಬುಳ್ಳಾ ತಿಳಿಸಿಕೊಟ್ಟರು. ಅಲ್ಲದೆ ಸೋಯಾ ಅವರೆ ಹಾಗೂ ಇತರೆ ಬೇಳೆ ಕಾಳುಗಳ ಬೀಜೋತ್ಪಾದನೆ ಕುರಿತು ವಿವರವಾದ ಮಾಹಿತಿ ನೀಡಿದರು.
ಶುಂಠಿ ಬೆಳೆಗಾಗಿ ಭೂಮಿ ತಯಾರಿ, ಬೀಜ ಗಡ್ಡೆಗಳ ಉಪಚಾರ, ಶುಂಠಿಯಲ್ಲಿ ಲಘು ಪೋಷಕಾಂಶಗಳ ಕೊರತೆ ಲಕ್ಷಣ ಮತ್ತು ನಿರ್ವಹಣೆ ಕುರಿತು ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ನಿಂಗದಳ್ಳಿ ಮಲ್ಲಿಕಾರ್ಜುನ ಮಾಹಿತಿ ನೀಡಿದರು.ಕೊನೆಯಲ್ಲಿ ಮುಂಗಾರಿನ ಪ್ರಮುಖ ಬೆಳೆಗಳಲ್ಲಿ ಸಮಗ್ರ ಸಸ್ಯ ಸಂರಕ್ಷಣಾ ನಿರ್ವಹಣೆ ಕುರಿತು ಡಾ.ಸುನೀಲಕುಮಾರ ಎನ್.ಎಮ್. ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ತರಬೇತಿ ನೀಡಿದರು.
ತೋಟಗಾರಿಕೆ ಇಲಾಖೆ ಜೈವಿಕ ಕೇಂದ್ರದ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಲಾಂಜನ ಅವರು ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಲ್ಲಿ ಜೈವಿಕ ಶಿಲಿಂದ್ರ ನಾಶಕವಾದ ಟ್ರೈಕೋಡರ್ಮಾ ಮತು ಸುಡೊಮೋನಾಸ್ ಬಳಕೆ ಹಾಗೂ ಅನುಕೂಲಗಳ ಕುರಿತು ನೆರೆದಿರುವ ರೈತರಿಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ ರೈತರು ಟ್ರೈಕೊಡರ್ಮಾ ಹಾಗೂ ಸುಡೊಮೋನಾಸ್ ಖರೀದಿಸಿದರು.