ಬೆಳೆ ಪರಿಹಾರ ತಾರತಮ್ಯ, ರೈತರಿಂದ ಎತ್ತು, ಚಕ್ಕಡಿ ಬಾರಕೋಲಿನೊಂದಿಗೆ ಪ್ರತಿಭಟನೆ

KannadaprabhaNewsNetwork |  
Published : May 28, 2024, 01:04 AM IST
ರೈತ ಮುಖಂಡರು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಬೆಳೆ ಪರಿಹಾರ ನೀಡುವಾಗ ಮುಂಡರಗಿ ತಾಲೂಕಿನ ರೈತರಿಗೆ ತಾರತಮ್ಯವಾಗಿದೆ. ಪರಿಹಾರ ಬರದೆ ಇರುವ ಸಾವಿರಾರು ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು

ಮುಂಡರಗಿ: ಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ತಾರತಮ್ಯ ಖಂಡಿಸಿ ತಾಲೂಕಿನ ನೂರಾರು ರೈತರು ಸೋಮವಾರ ರಾಜ್ಯ ರೈತ ಸಂಘ ವಿವಿಧ ಸಂಘಟನೆಗಳ ಅಶ್ರಯದಲ್ಲಿ ಎತ್ತು ಚಕ್ಕಡಿಗಳೊಂದಿಗೆ ಹಾಗೂ ಕೈಯಲ್ಲಿ ಬಾರಕೋಲು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಳೆ ಪರಿಹಾರ ನೀಡುವಾಗ ಮುಂಡರಗಿ ತಾಲೂಕಿನ ರೈತರಿಗೆ ತಾರತಮ್ಯವಾಗಿದೆ. ಪರಿಹಾರ ಬರದೆ ಇರುವ ಸಾವಿರಾರು ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ 17 ಸಾವಿರ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ. ಇನ್ನು 12 ಸಾವಿರ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಕೂಡಲೇ ಎಲ್ಲ ರೈತರಿಗೂ ಪರಿಹಾರ ದೊರಕಿಸಿಕೊಡಬೇಕು. ಬರಗಾಲದಿಂದ ತತ್ತರಿಸಿದ ರೈತರಿಗೆ ಪರಿಹಾರ ನೀಡುವಾಗ ತಾರತಮ್ಯ ಎಸಗಿದ್ದು ಖಂಡನೀಯ. ಜಿಲ್ಲಾಧಿಕಾರಿ ಸ್ವತಃ ಪ್ರತಿಭಟನೆ ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಿ ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ಹುಲಿಗುಡ್ಡ ಯೋಜನೆಯ ಹನಿ ನೀರಾವರಿ ರದ್ದಾಗಿ ಕಾಲುವೆ ಮೂಲಕ ನೀರಾವರಿಯಾಗಬೇಕು. ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ಪೂರೈಕೆಯಾಗಬೇಕು. ಜೋಳ ಖರೀದಿ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ನೀಡಬೇಕು. ಪ್ರತಿ ಗ್ರಾಮದಲ್ಲಿ 100 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಬೇಕು. ಬೆಳೆ ಪರಿಹಾರ ಇತರ ಮಾಸಾಶನದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು. ಸಂಜೆ 6ರಿಂದ ಬೆಳಗ್ಗೆ 6 ಗಂಟೆ ವರೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಸಿಬಿಲ್ ಸ್ಕೋರ್‌ಗೆ ರೈತರ ಸಾಲ ಪರಿಗಣಿಸಬಾರದು. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಆರಂಭಿಸಬೇಕು. ಯುದ್ದದಲ್ಲಿ ಮೃತಪಟ್ಟ ಸೈನಿಕರಿಗೆ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪ್ರಧಾನ ಮಂತ್ರಿ ಜೀವ ವಿಮೆ ಹಣ ಮೀಸಲಿಡಬೇಕು. ಎಪಿಎಂಸಿಯಲ್ಲಿ ರೈತ ಭವನ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

ಮಧ್ಯಾಹ್ನದ ಆನಂತರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಭೇಟಿ ನೀಡಿ ರೈತರ ಮನವಿ ಆಲಿಸಿದರು. ಗದಗ ಜಿಲ್ಲೆಯಲ್ಲಿ ಬರಗಾಲ ಸ್ಥಿತಿ ಇದ್ದು, ಬೆಳೆ ಪರಿಹಾರದ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ರೈತರಿಗೆ ಬೆಳೆ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ರೈತರ ಪರಿಹಾರ ಹಣ, ಮಾಸಾಶನ ಸಾಲದ ಹಣಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ, ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ, ರೈತ ಮುಖಂಡರಾದ ಚಂದ್ರಕಾಂತ ಉಳ್ಳಾಗಡ್ಡಿ, ಎಚ್.ಬಿ. ಕುರಿ, ಅಶ್ವಿನಿ ಗೌಡರ, ಶಂಕರಗೌಡ ಜಾಯನಗೌಡರ, ಹಾಲಪ್ಪ ಅರಹುಣಸಿ, ಇತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ರವಿಗೌಡ ಪಾಟೀಲ, ಕಸ್ತೂರವ್ವ ಅರಕೇರಿ, ದೇವೇಂದ್ರಪ್ಪ ಹಳ್ಳಿಕೇರಿ, ಈರಣ್ಣ ಹಡಪದ, ಚಂದ್ರಪ್ಪ ಗದ್ದಿ, ಸುಮಂಗಲಾ ತಳಕಲ್, ಶಂಬಣ್ಣ ಬೇವೂರ, ಶ್ರೀಕಾಂತ ಗೋಡಿ, ಯಂಕಪ್ಪ ಬಾರಕೇರ, ಚಂದ್ರಪ್ಪ ಬಳ್ಳಾರಿ, ಚನ್ನಬಸಪ್ಪ ಕಲ್ಲಳ್ಳಿ, ಕನಕಪ್ಪ ಕುರಿ, ಶಿವವ್ವ ಭಂಡಾರಿ, ಹನುಮವ್ವ, ಈರಣ್ಣ ಬೆಟಗೇರಿ, ಅಶೋಕ ಅಳವಂಡಿ, ಶಿವಪ್ಪ ರೋಣದ, ಲಕ್ಷ್ಮವ್ವ ಹಣ್ಣಿ, ನಿರ್ಮಲಾ, ಸಾವಕ್ಕ, ಹುಸೇನಬಿ ಸುಂಕದ, ಮಂಜುನಾಥ ಚನ್ನಳ್ಳಿ, ವಿಶ್ವನಾಥ ಕವಲೂರ, ಉಮೇಶ ಬೆನಕನಾಳ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ 6 ಸಾವಿರ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆ
ಪ್ರಾಣಿಪ್ರಿಯರನ್ನು ಆಕರ್ಷಿಸಿದ ಶ್ವಾನ ಪ್ರದರ್ಶನ