ದೇವಸ್ಥಾನದ ಮೂಲಸೌಕರ್ಯ ಶಾಶ್ವತ ಪರಿಹಾರಕ್ಕೆ ಪ್ರಯತ್ನ

KannadaprabhaNewsNetwork | Published : May 28, 2024 1:04 AM

ಸಾರಾಂಶ

ಹುಮನಾಬಾದ್ ತಾಲೂಕಿನ ಹುಣಸನಾಳ ಗ್ರಾಮದಲ್ಲಿ ದತ್ತ ಮೂರ್ತಿ ಪ್ರತಿಷ್ಠಾಪನೆ ದ್ವಿತೀಯ ವರ್ಷಾಚರಣೆ ಜರುಗಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ದಶಕಗಳಿಂದ ನೆನೆಗುದಿಗೆ ಬಿದ್ದಿರುವ ದೇವಸ್ಥಾನಕ್ಕೆ ಮೂಲ ಸೌಕರ್ಯ, ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಹುಮನಾಬಾದ ಪುರಸಭೆ ಸದಸ್ಯ ಸುನೀಲ್ (ಕಾಳಪ್ಪ) ಪಾಟೀಲ್ ಭರವಸೆ ನೀಡಿದರು.

ತಾಲೂಕಿನ ಹುಣಸನಾಳ ಗ್ರಾಮದ ದತ್ತಗಿರಿ ಪರ್ವತದಲ್ಲಿರುವ ದತ್ತ ಟ್ರಸ್ಟ್ ಸೇವಾ ಸಮಿತಿಯಿಂದ ಆಯೋಜಿಸಿದ ಮೂರ್ತಿ ಪ್ರತಿಷ್ಠಾಪನೆ ದ್ವಿತೀಯ ವರ್ಷಾಚರಣೆ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯುತ್ ಸಂಪರ್ಕ ಹಾಗೂ ದರ್ಶನಕ್ಕೆ ಬರುವ ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆಗೆ ನೂತನ ಬೋರ್‌ವೆಲ್‌ ಕಲ್ಪಿಸುವುದಾಗಿ ಜತೆಗೆ ದೇವಸ್ಥಾನಕ್ಕೆ ಸರಳವಾಗಿ ಹೋಗಿ ಬರಲು ಸಿಸಿ ರಸ್ತೆ ನಿರ್ಮಾಣದ ಭರವಸೆ ನೀಡಿದರು.

ಮಕ್ಕಳಿಗೆ ನಮ್ಮ ಪೂರ್ವಜರು ನೀಡಿದ ಸಂಸ್ಕಾರ ಸಂಸ್ಕೃತಿ ನೀಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವ ಜವಾಬ್ದಾರಿ ತಾಯಂದಿರದ್ದಾಗಿದೆ ಎಂದು ಇದೇ ವೇಳೆ ನುಡಿದರು.

ಅಪಾರ ಭಕ್ತ ಸಾಗರ ಮಧ್ಯೆ ನಸೂಕಿನ ಜಾವದಲ್ಲಿ ಸುಪ್ರಭಾತ, ಸಕಲ ದೇವತಾ ಆಗ್ರಹ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬೆಳಗ್ಗೆ ಶ್ರೀ ರಾಮ ಮಂದಿರದಿಂದ ಗ್ರಾಮದ ಪ್ರಮುಖ ಮಾರ್ಗಗಳ ಮೂಲಕ ಸುಮಂಗಲಿಯರಿಂದ ಸಕಲ ವಾದ್ಯಗಳೊಂದಿಗೆ ಕುಂಭ, ಗಂಗಾ ಪೂಜೆ ಜರುಗಿತು.

ದತ್ತ ಮೂರ್ತಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ, ಕ್ಷೀರಾಭಿಷೇಕ, ಗಂಧಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವೇದ ಮಂತ್ರಗಳ ಪಠಣದೊಂದಿಗೆ ಸಕಲ ಧಾರ್ಮಿಕ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಹೋಮ ಹವನ, ಮಹಾ ಮಂಗಳಾರತಿ ಬಳಿಕ ಪ್ರಸಾದ ಜರುಗಿತು. ರಾಜ್ಯ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರು ಬೆಳಿಗ್ಗೆಯಿಂದ ದತ್ತನ ಮೂರ್ತಿಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಅಧ್ಯಕ್ಷ ನೀಲಕಂಠರಾವ ಪಾಟೀಲ್, ಉಪಾಧ್ಯಕ್ಷ ಬಾಬುರಾವ ಬಿರಾದಾರ, ಕಾರ್ಯದರ್ಶಿ ನರಸಿಂಗರಾವ ಬೆಂಬಳಗೆ, ಬಾಲಾಜಿ ಕೊಂಗಳೆ, ಅನೀಲ್ ಪಾಟೀಲ್, ವೈಜನಾಥ ಪಾಟೀಲ್, ನರಸಿಂಗ್ ಪಾಟೀಲ್, ಶಿವಾಜಿರಾವ ಪಾಟೀಲ್, ಸುರೇಶ ಕಾಟೆಕರ್, ಮಲ್ಲಿಕಾರ್ಜುನ ಮೋರೆ, ರಮೇಶ ಬಿರಾದಾರ, ಕಾಶಪ್ಪಾ ಗೋದೆ ಸೇರಿದಂತೆ ಅನೇಕರಿದ್ದರು.

Share this article