ವೈಜ್ಞಾನಿಕ ಕೃಷಿಯಿಂದ ಲಾಭ ನಿಶ್ಚಿತ: ಶಿವಪ್ಪ

KannadaprabhaNewsNetwork |  
Published : Jul 17, 2026, 02:15 AM IST
ಹಳಿಯಾಳ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಗ್ರಾಮೀಣ ಯುವಜನರಿಗಾಗಿ ನಡೆದ 12 ದಿನಗಳ ಹೈನುಗಾರಿಕೆ ಮತ್ತು ಗೊಬ್ಬರ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. | Kannada Prabha

ಸಾರಾಂಶ

ಕೃಷಿ ಮತ್ತು ಕೃಷಿಪೂರಕ ಚಟುವಟಿಕೆ ಅತ್ಯಂತ ಲಾಭದಾಯಕವಾದ ಉದ್ಯಮಗಳಾಗಿ ಬೆಳೆಯುತ್ತಿದ್ದು, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಯೋಜಿತ ರೀತಿಯಲ್ಲಿ ಕೃಷಿಯನ್ನು ಕೈಗೊಂಡರೆ ಉತ್ತಮ ಲಾಭ ನಿಶ್ಚಿತ.

ಕನ್ನಡಪ್ರಭ ವಾರ್ತೆ ಹಳಿಯಾಳ

ಕೃಷಿ ಮತ್ತು ಕೃಷಿಪೂರಕ ಚಟುವಟಿಕೆ ಅತ್ಯಂತ ಲಾಭದಾಯಕವಾದ ಉದ್ಯಮಗಳಾಗಿ ಬೆಳೆಯುತ್ತಿದ್ದು, ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಯೋಜಿತ ರೀತಿಯಲ್ಲಿ ಕೃಷಿಯನ್ನು ಕೈಗೊಂಡರೆ ಉತ್ತಮ ಲಾಭ ನಿಶ್ಚಿತ ಎಂದು ಹಳಿಯಾಳದ ಪ್ರಗತಿಪರ ಸಾವಯವ ರೈತ, ಕೃಷಿ ಚಿಂತಕ ಬಿ.ಎಚ್. ಶಿವಪ್ಪ ಹೇಳಿದರು.

ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯವರು ಗ್ರಾಮೀಣ ಯುವಜನರಿಗಾಗಿ ಆಯೋಜಿಸಿದ್ದ 12 ದಿನಗಳ ಹೈನುಗಾರಿಕೆ ಮತ್ತು ಗೊಬ್ಬರ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಕೃಷಿ ಇದೊಂದು ಬೃಹತ್ ಕ್ಷೇತ್ರವಾಗಿದ್ದು, ಕೃಷಿ ಹಾಗೂ ಕೃಷಿಪೂರಕ ಚಟುವಟಿಕೆ ಗ್ರಾಮೀಣ ಆರ್ಥಿಕತೆ ಬಲಪಡಿಸುವಲ್ಲಿ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ಮುಖ್ಯಪಾತ್ರವಹಿಸುತ್ತವೆ. ನಮ್ಮ ಯುವಕರು ಭವಿಷ್ಯದಲ್ಲಿ ವೈದ್ಯರಾಗುವ, ಎಂಜಿನಿಯರ್, ಸರ್ಕಾರಿ ಸೇವೆ ಮಾಡುವ ಗುರಿ ಹೊಂದುತ್ತಾರೆಯೇ ವಿನಃ ಯಾರೊಬ್ಬರೂ ನಾನು ಕೃಷಿಕನಾಗುತ್ತೇನೆ, ರೈತನಾಗುತ್ತೇನೆ ಎಂದು ಹೇಳಲು ಮುಂದೆ ಬರುವುದಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಕೃಷಿಯಿಂದ ವಿಮುಖರಾಗುತ್ತಿರುವ ನಮ್ಮ ಯುವಪೀಳಿಗೆಯನ್ನು ಮತ್ತೆ ಕೃಷಿಯತ್ತ ಕರೆದುಕೊಂಡು ಹೋಗುವ ಕಾರ್ಯವಾಗಬೇಕು ಎಂದರು.

ಬೆಳಗಾವಿಯ ಕೆ. ಎಗ್ರೋ ಇಂಡಸ್ಟ್ರಿಸ್ ಪ್ರಮುಖರಾದ ಅಶೋಕ ಗಡ್ಹೆ ಮಾತನಾಡಿ, ಆಧುನಿಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ, ಸಾವಯವ ಕೃಷಿಯ ಮಹತ್ವ, ಎರೆಹುಳ ಗೊಬ್ಬರ ಉತ್ಪಾದನೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ತಂತ್ರಗಳು ಹಾಗೂ ಕೃಷಿ ಆಧಾರಿತ ಉದ್ಯಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಪ್ರಗತಿಪರ ರೈತ ಪರಶುರಾಮ ಮಾತನಾಡಿ, ಕೃಷಿಯಲ್ಲಿ ನಿರಂತರ ಕಲಿಕೆ, ಪರಿಶ್ರಮ ಮತ್ತು ತಾಳ್ಮೆಯು ಯಶಸ್ಸಿನ ಮೂಲ ಮಂತ್ರಗಳಾಗಿವೆ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ ಆಳವಡಿಸಿಕೊಂಡು ಉತ್ತಮ ಆದಾಯ ಗಳಿಸಿ ಯಶಸ್ವಿ ಉದ್ಯಮಿಗಳಾಗಬಹುದು ಎಂದು ತಿಳಿಸಿದರು.

ಆರ್‌ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿ, ಹೈನುಗಾರಿಕೆಯ ವೈಜ್ಞಾನಿಕ ನಿರ್ವಹಣೆ, ರೋಗಗಳ ತಡೆ ಮತ್ತು ನಿಯಂತ್ರಣ, ಸರ್ಕಾರಿ ಯೋಜನೆಗಳ ಮಾಹಿತಿ, ಎರೆಹುಳ ಗೊಬ್ಬರ ತಯಾರಿಕೆ, ಅದರ ನಿರ್ವಹಣೆ ಹಾಗೂ ಕೃಷಿ ಆಧಾರಿತ ಸ್ವಯಂ ಉದ್ಯೋಗವನ್ನು ಹೇಗೆ ಪ್ರಾರಂಭಿಸಬೇಕೆಂಬುದರ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು ಎಂದು ತಿಳಿಸಿದರು.

ಶಿಬಿರಾರ್ಥಿಗಳು ತರಬೇತಿ ಅನುಭವ ಹಂಚಿಕೊಂಡರು. ಉಪನ್ಯಾಸಕ ವೀರೇಶ್ ತಾಳಿಕೋಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ನಿರ್ವಹಣೆಗೆ ಪದವಿ ಮುಖ್ಯವಲ್ಲ, ಕೌಶಲ್ಯ ಬೇಕು
ಹೂಳು ತುಂಬಿದ ಚರಂಡಿ ದುರಸ್ತಿ ಮಾಡಿ: ಡಂಬಳ ಗ್ರಾಮಸ್ಥರ ಆಗ್ರಹ