ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.57ರಷ್ಟು ಅಧಿಕ ಮಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಹಿಂದಿನ ಬಿಜೆಪಿ ಸರ್ಕಾರ ಪ್ರಕೃತಿ ವಿಕೋಪ ನಿಧಿ ಪರಿಹಾರ ನಿಧಿಯಡಿ ಬಜೆಟ್ಟಿನಲ್ಲಿ ಹಣವನ್ನು ಇಡದೇ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ಪರಿಣಾಮ ಆ ಸರ್ಕಾರ ಮಾಡಿದ ಸಾಲವನ್ನು ನಾವು ತೀರಿಸುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಅತಿವೃಷ್ಟಿಯಿಂದ ತಾಲೂಕಿನಲ್ಲಿ ಹಾನಿಯಾಗಿರುವ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ನಂತರ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡು ಭಾಗದಲ್ಲಿ ಗಳಿ ಮಳೆಯಿಂದಾಗಿ ಬಹಳಷ್ಟು ಮನೆಗಳಿಗೆ ಹಾನಿ ಸಂಭವಿಸಿದೆ. ಇದರಲ್ಲಿ ದಾಖಲೆ ಇಲ್ಲದ ಮನೆಗಳೂ ಇದ್ದು, ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಅರಣ್ಯ ಪ್ರದೇಶ ಸೇರಿದಂತೆ ದಾಖಲೆ ಇಲ್ಲದ ಮನೆಗಳಿಗೆ ಕಾಯ್ದೆ ಆಧಾರದಲ್ಲಿ ಪರಿಹಾರ ನೀಡಲು ಅಸಾಧ್ಯ. ದಾಖಲೆ ಇಲ್ಲದ ಸಂತ್ರಸ್ತರಿಗೂ ಪರಿಹಾರ ದೊರಕಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಇನ್ನು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದೇನೆ. ಮಕ್ಕಳ ಪೌಷ್ಠಿಕತೆ ಮತ್ತು ಹಾಜರಾತಿಗೆ ಪ್ರೋತ್ಸಾಹ ನೀಡುವ ಸಲುವಾಗಿ ವಾರದಲ್ಲಿ ಆರು ಮೊಟ್ಟೆ ನೀಡುವ 1400 ಕೋಟಿ ರು. ವೆಚ್ಚದ ಯೋಜನೆಗೆ ಅಜೀಂ ಪ್ರೇಂಜಿ ಫೌಂಡೇಶನ್ ನೀಡುತ್ತಿರುವ ನೆರವು ಸ್ಮರಣೀಯವಾಗಿದೆ. ಶಿಕ್ಷಕರ ಕೊರತೆಯಾಗದಂತೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳಲ್ಲಿ ಬಿಇಓ ಕಟ್ಟಡ ವಾಹನ ಸೌಕರ್ಯದ ಕೊರತೆ ಇದ್ದು ಹಂತ ಹಂತವಾಗಿ ಬಗೆಹರಿಸಬೇಕಿದೆ ಎಂದರು.ಬಿಜೆಪಿ ಅಧಿಕಾರವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮತ್ತು ತಾಲೂಕಿನಲ್ಲಿ ನಡೆದಿರುವ ಎಲ್ಲಾ ಕಳಪೆ ಕಾಮಗಾರಿಗಳ ಬಗ್ಗೆ ತಜ್ಞರಿಂದ ವರದಿ ತರಿಸಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಅನುದಾನ ಸದ್ಬಳಕೆಯಾಗಬೇಕಿದೆ. ಕಳಪೆ ಕಾಮಗಾರಿಗೆ ತೇಪೆ ಹಾಕುವ ಕಾರ್ಯದಿಂದ ಲೋಪವನ್ನು ಮುಚ್ಚಿಡಲಾಗದು. ಎಲ್ಲವೂ ಬೆಳಕಿಗೆ ಬರಲಿದೆ ಎಂದೂ ಹೇಳಿದರು. ಅನಿವಾರ್ಯ ಕಾರಣಗಳಿಂದ ತಾಲೂಕು ಮಟ್ಟದ ವಿವಿಧ ಸಮಿತಿಗಳ ರಚನೆಗೆ ವಿಳಂಬವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕುಸಿತ ಮತ್ತು ಭಾರತೀಪುರ ಫ್ಲೈ ಓವರ್ ಬಳಿ ಧರೆ ಕುಸಿದ ಸ್ಥಳಗಳಿಗೆ ಜಿಲ್ಲಾಧಿಕಾರಿ ಗುರುದತ್, ಜಿಪಂ ಸಿಇಓ ಹೇಮಂತ್, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಅಗತ್ಯ ಸೂಚನೆ ನೀಡಿದರು.ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಾಂಗ್ರೆಸ್ ಮುಖಂಡರಾದ ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಅಮರನಾಥ ಶೆಟ್ಟಿ, ನಾಬಳ ಶಚ್ಚೀಂದ್ರ ಹೆಗ್ಡೆ ಮುಂತಾದವರು ಇದ್ದರು.‘ಗ್ಯಾರಂಟಿ’ಯಿಂದ ಅಭಿವೃದ್ಧಿಗೆ ಅಡಚಣೆ ಇಲ್ಲ: ಸಚಿವ ಸ್ಪಷ್ಟನೆ
ಹಿಂದಿನ ಬಿಜೆಪಿ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೆಲವೇ ಸಂತ್ರಸ್ತರಿಗೆ ಪರಿಹಾರ ನೀಡಿದೆ. ಬಜೆಟ್ಟಿನಲ್ಲಿ ಹಣವನ್ನು ಇಡದೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ಪರಿಣಾಮ, ಬಿಜೆಪಿ ಸರ್ಕಾರ ಮಾಡಿದ ಸಾಲವನ್ನು ನಾವು ತೀರಿಸುವಂತಾಗಿದೆ. ನಮ್ಮ ಸರ್ಕಾರ 1.43 ಲಕ್ಷ ಕೋಟಿ ಅಭಿವೃದ್ಧಿ ಯೋಜನೆ ಗಳಿಗೆ ಕಾದಿರಿಸಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡಚಣೆಯೂ ಇಲ್ಲ. ಕಾಂಗ್ರೆಸ್ ಮುಂಗಡ ಪತ್ರದಲ್ಲಿ ಹಣವನ್ನು ಕಾದಿರಿಸಿಯೇ ಯೋಜನೆಗಳನ್ನು ಘೋಷಣೆ ಮಾಡಿದೆ. ಬಿಜೆಪಿಯವರ ಆರೋಪ ರಾಜಕೀಯದಿಂದ ಕೂಡಿದ್ದು ಸತ್ಯಕ್ಕೆ ದೂರವಾಗಿದೆ ಎಂದರು.