ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಕಳ: ಸ್ವಾಮಿ ವಿವೇಕಾನಂದರ ಚಿಂತನೆಗಳು ಭಾರತ ಮಾತ್ರವಲ್ಲ ವಿಶ್ವವ್ಯಾಪಿಯಾದುದು. ಯುವಕರು ದೇಶದ ಭವಿಷ್ಯ ಉಜ್ವಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ್ಮೋದ್ಧಾರ ಮಾರ್ಗವೇ ಜಗವನ್ನು ಹಾಗೂ ಮನುಷ್ಯರನ್ನು ಅರಿಯಲು ಇರುವ ದಾರಿ. ಸ್ವಾಮಿ ವಿವೇಕಾನಂದರು ಎಲ್ಲರಿಗೂ ಸ್ಫೂರ್ತಿಯ ಚಿಲುಮೆ ಎಂದು ಗಣಿತ ಉಪನ್ಯಾಸಕ ಪ್ರದೀಪ್ ಅಂಚನ್ ಹೇಳಿದರು.
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಸಪ್ತಾಹದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಜಗತ್ತು ಭಾರತದ ಕಡೆಗೆ ಕೀಳಾಗಿ ಕಾಣುತ್ತಿರುವಾಗ ಭಾರತದ ಅಂತಃಶಕ್ತಿ, ಆತ್ಮಜ್ಞಾನ, ಆಧ್ಯಾತ್ಮ ಕೊಡುಗೆಗಳ ಕುರಿತು ಪಾಶ್ಚಿಮಾತ್ಯರ ಕಣ್ಣು ತೆರೆಸಿ, ಶ್ರೇಷ್ಠ ಜ್ಞಾನ ಪರಂಪರೆ, ಮೌಲ್ಯಗಳ ಭಂಡಾರ ಭಾರತ ಎಂಬುದನ್ನು ತಿಳಿಸಿಕೊಟ್ಟವರು ವಿವೇಕಾನಂದರು. ಆದ್ದರಿಂದ ಭಾರತೀಯರಾದ ನಾವೆಲ್ಲರೂ ವಿವೇಕಾನಂದರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ನೈತಿಕ ಶಕ್ತಿ, ಉತ್ತಮ ವಿಚಾರಧಾರೆಗಳು, ಎಲ್ಲರೂ ಸಮಾನರು ಹಾಗೂ ಮನುಷ್ಯತ್ವದಲ್ಲಿ ದೇವರನ್ನು ಕಂಡವರು ವಿವೇಕಾನಂದರು. ಅವರ ಮಾತುಗಳು ನಮ್ಮ ನಡೆ-ನುಡಿಯಲ್ಲಿ ಪ್ರೇರಣೆ ಪಡೆದು ಹಾಗೆಯೇ ಜೀವಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ಚಂದ್ರಕಾಂತ್, ರಾಮಕೃಷ್ಣ ಹೆಗಡೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಂಹಿತಾ ಹೆಬ್ಬಾರ್ ವಂದಿಸಿದರು. ಶ್ರದ್ಧಾ ಅಡಿಗ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.