ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಶಿಕ್ಷಣದ ಪ್ರಗತಿಯೇ ದೇಶದ ಅಭಿವೃದ್ಧಿಯ ನಿಜವಾದ ಅಳತೆಗೋಲು. ಕೇವಲ ಭಾಷಣದಿಂದ ಪ್ರಗತಿ ಅಸಾಧ್ಯ. ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಅರ್ಪಣಾ ಮನೋಭಾವದ ಶಿಕ್ಷಕರ ಪಾತ್ರವೂ ನಿರ್ಣಾಯಕವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತೀರ್ಥಹಳ್ಳಿ ಪಟ್ಟಣದ ಗ್ರಾಮೀಣ ಸೌಧದಲ್ಲಿ ಶನಿವಾರ 2024-25 ನೇಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ರ್‍ಯಾಂಕ್ ಗಳಿಸಿದ ವಿಧ್ಯಾರ್ಥಿಗಳು ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಸಾಧಕ ವಿಧ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ಸುಶಿಕ್ಷಿತ ಸಮಾಜ ನಿರ್ಮಾಣದೊಂದಿಗೆ ದೇಶದ ಪರಿವರ್ತನೆಯೂ ಸಾಧ್ಯವಾಗಲಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿರುವ ತಾಲೂಕಿನ ಸಾಧನೆ ಹೆಮ್ಮೆ ತರುವಂತಿದ್ದು, ಇದಕ್ಕೆ ಕಾರಣರಾದ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಕಾರ್ಯದಕ್ಷತೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಸಮರ್ಥ ನಿರ್ವಹಣೆ ಹಾಗೂ ಅಧ್ಯಾಪಕರ ಕಾಳಜಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎಂದರು.ಶಿಕ್ಷಕರ ಕೊರತೆಯ ನಡುವೆಯೂ ಸರ್ಕಾರಿ ಶಾಲೆಗಳ ಫಲಿತಾಂಶವೂ ಪ್ರಶಂಸನೀಯವಾಗಿದೆ. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಇರುವಲ್ಲಿ ಪ್ರಾಥಮಿಕ ಆಂಗ್ಲ ಮಾಧ್ಯಮವನ್ನು ಸರ್ಕಾರ ಮಂಜೂರು ಮಾಡುವ ಅಗತ್ಯವಿದೆ. ಇದರಿಂದ ಡೊನೇಶನ್ ನೀಡಲಾಗದ ಬಡ ಮಕ್ಕಳಿಗೂ ಇಂದಿನ ಅಗತ್ಯಕ್ಕನುಗುಣವಾಗಿ ಗುಣ ಮಟ್ಟದ ಶಿಕ್ಷಣ ದೊರೆಯುತ್ತದೆ. ಜನಪ್ರತಿನಿಧಿಗಳಾದವರು ತಾವು ಓದಿರುವ ಶಾಲೆಯನ್ನು ದತ್ತು ತೆಗೆದುಕೊಂಡಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ದೊರೆಯುತ್ತದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಸಲುವಾಗಿ ಲಾಗಾಯ್ತಿನಿಂದ ಶ್ರಮಿಸಿದ್ದೇನೆ. 8 ಪ್ರೌಡಶಾಲೆ, 5 ಪಿಯು ಹಾಗೂ ಒಂದು ಪ್ರಥಮ ದರ್ಜೆ ಕಾಲೇಜು, ಐಟಿಐ, ಮೊರಾರ್ಜಿ ವಸತಿ ಶಾಲೆ ಹಾಗೂ ಎರಡು ಹೆಣ್ಣು ಮಕ್ಕಳ ಹಾಸ್ಟೆಲನ್ನು ಮಂಜೂರು ಮಾಡಿಸಿದ್ದೇನೆ. ಒಂದು ಮಗು ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ನನ್ನ ನಿಲುವಾಗಿದೆ ಎಂದರು.ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿದರೆ ಮಾತ್ರ ತಮ್ಮ ಮಕ್ಕಳು ಬುದ್ದಿವಂತರಾಗುತ್ತಾರೆ ಎಂಬ ಮನೋಭಾವ ಪೋಷಕರಲ್ಲಿದೆ. ಅತ್ಯಂತ ಸಮರ್ಥ ಶಿಕ್ಷಕರಿರುವ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದಲ್ಲಿ ಉತ್ತಮ ಶೈಕ್ಷಣಿಕ ಫಲಿತಾಂಶ ಪಡೆಯುವುದು ಸಾಧ್ಯ. ತಾಲೂಕಿನ ಶೈಕ್ಷಣಿಕ ಸಾಧನೆಗೆ ಕಾರಣರಾದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಶಾಸಕರ ಹೃದಯವಂತಿಕೆ ಅನುಕರಣೀಯವಾಗಿದೆ ಎಂದರು.
ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಓ ಎಂ. ಶೈಲಾ, ತೀರ್ಥಹಳ್ಳಿ ಮತ್ತು ಹೊಸನಗರ ಬಿಇಓಗಳಾದ ವೈ. ಗಣೇಶ್ ಮತ್ತು ಕೃಷ್ಣಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ, ಕೆ.ನಾಗರಾಜ ಶೆಟ್ಟಿ ಹಾಗೂ ತಾಲೂಕು ಶಿಕ್ಷಕರ ಸಂಘದ ಪಧಾಧಿಕಾರಿಗಳು ವೇದಿಕೆಯಲ್ಲಿದ್ದರು.